
ಶ್ರೀರಂಗಪಟ್ಟಣ: ‘ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ನಮ್ಮ ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದರೆ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಅಧಿಕಾರಿಗಳನ್ನು ಪುರಸ್ಕರಿಸಲಾಗುವುದು’ ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಶನಿವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಲಿಕಾ ಮಿತ್ರ ವಿತರಿಸಿ ಅವರು ಮಾತನಾಡಿದರು. ‘ಎಸ್‌ಎಸ್‌ಎಲ್‌ಸಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ಸೇರಿದಂತೆ ಅಗತ್ಯ ಇರುವ ಎಲ್ಲ ನೆರವು ನೀಡುತ್ತೇನೆ. ಪರೀಕ್ಷೆ ದೃಷ್ಟಿಯಿಂದ ಸಿದ್ದತಾ ಪರೀಕ್ಷೆಗಳನ್ನು ನಡೆಸಬೇಕು. ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು. ಫಲಿತಾಂಶ ಹೆಚ್ಚಿಸಲು ಶಿಕ್ಷಕರು ಶಕ್ತಿಮೀರಿ ಕೆಲಸ ಮಾಡಬೇಕು. ತಾಲ್ಲೂಕಿಗೆ ಗೌರವ ತರಬೇಕು’ ಎಂದು ಹೇಳಿದರು.
‘ಶಾಲೆಗಳಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟದಲ್ಲಿ ಶುದ್ಧತೆ ಮತ್ತು ಪೌಷ್ಟಿಕತೆ ಇರಬೇಕು. ವಯೋ ನಿವೃತ್ತಿ ಹೊಂದುವ ಅಡುಗೆಯವರು ಮತ್ತು ಸಹಾಯಕರಿಗೆ ಸರ್ಕಾರ ಇಡುಗಂಟು ನೀಡುತ್ತಿದೆ. ಮಹಿಳೆಯರಿಗೆ ಉಚಿತ ಬಸ್, ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ₹2 ಸಾವಿರ ನೆರವು ನೀಡುತ್ತಿದ್ದು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಿ. ನಂದೀಶ್ ಪ್ರಾಸ್ತಾವಿಕ ಮಾತುಗಳಾಡಿದರು. ಸೇವೆಯಿಂದ ನಿವೃತ್ತರಾದ ಮಧ್ಯಾಹ್ನ ಬಿಸಿಯೂಟ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಡೈರಿಯನ್ನು ರಮೇಶ ಬಂಡಿಸಿದ್ದೇಗೌಡ ಬಿಡುಗಡೆ ಮಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಹಿರಿಯ ವೈದ್ಯ ಡಾ.ಬಿ. ಸುಜಯಕುಮಾರ್, ಉಪ ಪ್ರಾಂಶುಪಾಲೆ ಸಪ್ನಾ, ಶಿಕ್ಷಣ ಸಮನ್ವಯಾಧಿಕಾರಿ ಪ್ರಭಾ, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಶಿಕ್ಷಣಾಧಿಕಾರಿ ರವಿಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಂ. ನಾಗರಾಜು, ನಿರ್ದೇಶಕರಾದ ಬಿ.ಎಸ್. ಚಂದ್ರಶೇಖರ್, ಶಿವಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.