
ನಾಗಮಂಗಲ (ಮಂಡ್ಯ ಜಿಲ್ಲೆ): ‘ನೈತಿಕ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಭಾವನಾತ್ಮಕ ಗುಣಗಳನ್ನು ಮೈಗೂಡಿಸಿಕೊಂಡಾಗ ಜೀವನ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯ’ ಎಂದು ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲ್ಲೂಕಿನ ಜಕ್ಕನಕಟ್ಟಿಯ ಕಿತ್ತೂರು ರಾಣಿಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಅನುಷಾ ಕರಿಬಸಯ್ಯ ಹಿರೇಮಠ ಹೇಳಿದರು.
ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ಆದಿಚುಂಚನಗಿರಿ ಕ್ಷೇತ್ರದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ಮಾನವೀಯತೆ, ಪ್ರಾಮಾಣಿಕತೆ, ಸಹಾನುಭೂತಿ, ಪ್ರೀತಿ, ಶಕ್ತಿ, ಸಹಿಷ್ಣುತೆಯನ್ನು ಮಕ್ಕಳು ಅಳವಡಿಸಿಕೊಳ್ಳಬೇಕು. ಪರಿಶ್ರಮದಿಂದ ಮಾತ್ರ ಯಶಸ್ಸು ಖಂಡಿತ’ ಎಂದರು.
ಹಾಳು ಮಾಡುತ್ತಿರುವ ಮೊಬೈಲ್
ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದ ಶಿವಮೊಗ್ಗದ ಜಾವಳ್ಳಿಯ ಜ್ಞಾನದೀಪ ಶಾಲೆಯ ವಿದ್ಯಾರ್ಥಿ ಪಿ.ಬಿ.ಶ್ರೀಕಾಂತ್, ‘ಮೊಬೈಲ್ ಫೋನ್ ನಮ್ಮಂತಹ ಎಳೆಯ ಮನಸ್ಸುಗಳನ್ನು ಆಕರ್ಷಿಸಿ ನಮ್ಮ ಸಮಯ ಮತ್ತು ಮನಸ್ಸು ಎರಡನ್ನೂ ಹಾಳು ಮಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ‘ಮಕ್ಕಳ ಮನಸ್ಸು ದೇವರ ಮನಸ್ಸಿದ್ದಂತೆ. ಆ ಮುಗ್ಧ ಮನಸ್ಸಿನಲ್ಲಿ ಕಲ್ಮಶ ಇರುವುದಿಲ್ಲ. ಭಾವನೆಗಳಿಗೆ ಭಾಷೆ ಲೇಪನ ಕೊಟ್ಟು ಬರಹ ಮೂಡಿಸಿದರೆ ವೇದ ಉಪನಿಷತ್ತುಗಳಿಗೆ ಸಮನಾದ ಸತ್ಯ ಹೊರಹೊಮ್ಮುತ್ತದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ್, ಮೈಸೂರಿನ ಪೂರ್ಣಚೇತನ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಪೃಥು ಪಿ.ಅದ್ವೈತ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮತ್ತು ಅಂಕಣಕಾರ ಬಿ.ಚಂದ್ರೇಗೌಡ ಮಾತನಾಡಿದರು.
ಅಂತರರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಆಟಗಾರರಾದ ಎಸ್.ಪವನ್ ಮತ್ತು ಎಸ್.ಪುನೀತ್ ರಾಷ್ಟ್ರಧ್ವಜ ಹಾಗೂ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ಯೋಗ ವಿದ್ಯಾರ್ಥಿನಿ ಬಿ.ಕೆ.ಸಿಂಚನಾ ನಾಡ ಧ್ವಜಾರೋಹಣ ನೆರವೇರಿಸಿದರು.
ಬಳಿಕ, ಮೈಸೂರಿನ ನಾದಶ್ರೀ ಆರ್.ಭಟ್ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ, ಬೆಂಗಳೂರಿನ ಎನ್.ಸೃಜನಾ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಶಿವಮೊಗ್ಗ ಪುರಲೆ ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಮಾನ್ವಿ ಅಧ್ಯಕ್ಷತೆಯಲ್ಲಿ ಕಥಾಗೋಷ್ಠಿ ನಡೆದವು.
ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಬೆಂಗಳೂರಿನ ಗೋಸಾಯಿ ಮಠದ ಪೀಠಾಧ್ಯಕ್ಷ ಮಂಜುನಾಥ ಭಾರತಿ ಸ್ವಾಮೀಜಿ, ಮಕ್ಕಳ ಸಾಹಿತ್ಯ ಪರಿಷತ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎನ್.ಮಂಜುನಾಥ್, ಸಿಪಿಐ ನಿರಂಜನ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಎ.ಟಿ.ಶಿವರಾಮು ಪಾಲ್ಗೊಂಡಿದ್ದರು.
–––
ಭಾವನೆ ಶುದ್ಧವಾಗಿದ್ದರೆ ಭಾಷೆಯ ಬೆಂಬಲವಿರುವುದಿಲ್ಲ. ಕಲಿಯಬಾರದ ಕಲಿಯಬಹುದಾದ ಎಲ್ಲಾ ಭಾಷೆಗಳನ್ನು ಕಲಿತರೆ ಭಾವನೆ ಶುದ್ಧವಾಗಿರುವುದಿಲ್ಲ
–ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ
‘ಶಿಕ್ಷಕರ ಗೋಳು ಕೇಳುವವರೇ ಇಲ್ಲ’
‘18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮೊಬೈಲ್ ಫೋನ್ ಹಿಡಿದರೆ ದಂಡ ಹಾಕುವಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು’ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಪಿ.ಬಿ.ಶ್ರೀಕಾಂತ್ ಒತ್ತಾಯಿಸಿದರು. ‘ಈ ಆದೇಶ ಪಾಲಿಸಿದರೆ ಮಾತ್ರ ಮುಂದಿನ ಯುವ ಪೀಳಿಗೆ ಅಭಿವೃದ್ಧಿಯಾಗಲು ಸಾಧ್ಯ’ ಎಂದು ಪ್ರತಿಪಾದಿಸಿದರು. ‘ಪ್ರಾಥಮಿಕ ಶಾಲಾ ಶಿಕ್ಷಕರ ಗೋಳು ಕೇಳುವವರೇ ಇಲ್ಲದಿರುವುದು ಅತ್ಯಂತ ವಿಪರ್ಯಾಸ. ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಯೋಚನೆ ಕೈಬಿಟ್ಟು ಸಬಲೀಕರಣಕ್ಕೆ ಸರ್ಕಾರ ಮುಂದಾಗಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.