ADVERTISEMENT

ಶ್ರೀರಂಗಪಟ್ಟಣ: ಕಲ್ಲು ಕ್ವಾರಿಯಲ್ಲಿ ಮುಳುಗಿ ಇಬ್ಬರು ಯುವತಿಯರ ಸಾವು

​ಪ್ರಜಾವಾಣಿ ವಾರ್ತೆ
Published 5 ಮೇ 2023, 15:38 IST
Last Updated 5 ಮೇ 2023, 15:38 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕಾಳೇನಹಳ್ಳಿ ಶೆಡ್ಡು ಗ್ರಾಮದ ಬಳಿ, ಕಲ್ಲು ಕ್ವಾರಿಯ ನೀರಿನಲ್ಲಿ ಶುಕ್ರವಾರ ಇಬ್ಬರು ಯುವತಿಯರು ಮಳುಗಿ ಮೃತಪಟ್ಟ ಸ್ಥಳಕ್ಕೆ ಗ್ರಾಮಾಂತರ ಠಾಣೆ ಸಿಪಿಐ ಬಿ.ಜಿ. ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಕಾಳೇನಹಳ್ಳಿ ಶೆಡ್ಡು ಗ್ರಾಮದ ಬಳಿ, ಕಲ್ಲು ಕ್ವಾರಿಯ ನೀರಿನಲ್ಲಿ ಶುಕ್ರವಾರ ಇಬ್ಬರು ಯುವತಿಯರು ಮಳುಗಿ ಮೃತಪಟ್ಟ ಸ್ಥಳಕ್ಕೆ ಗ್ರಾಮಾಂತರ ಠಾಣೆ ಸಿಪಿಐ ಬಿ.ಜಿ. ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಟಿ.ಎಂ. ಗ್ರಾ.ಪಂ. ವ್ಯಾಪ್ತಿಯ ಕಾಳೇನಹಳ್ಳಿ ಶೆಡ್ಡು ಗ್ರಾಮದ ಬಳಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಯವತಿಯರು ಕಲ್ಲು ಕ್ವಾರಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಕಾಳೇನಹಳ್ಳಿ ಶೆಡ್ಡು ಗ್ರಾಮದ ಕುಮಾರ್‌ ಅವರ ಮಗಳು ಇಳಾಮತಿ (19) ಮತ್ತು ಅವರ ಹತ್ತಿರದ ಬಂಧು, ರಾಮ ಎಂಬವರ ಮಗಳು ಮೀನಾ (17) ಮೃತಪಟ್ಟಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ 6 ವರ್ಷ ಹೆಣ್ಣು ಮಗುವನ್ನು ರಕ್ಷಿಸಲು ಹೋಗಿ ನೀರಿನಲ್ಲಿ ಇಬ್ಬರೂ ಮುಳುಗಿದ್ದಾರೆ. ಮಗುವನ್ನು ದಡ ಸೇರಿಸಿದ ಯುವತಿಯರು ಕ್ವಾರಿಯಿಂದ ಹೊರ ಬರಲಾಗದೆ ಜಲ ಸಮಾಧಿಯಾಗಿದ್ದಾರೆ.

ಯವತಿಯರ ಜತೆಯಲ್ಲಿ ಇದ್ದ ಈಶ್ವರಮ್ಮ ಎಂಬವವರು ಒಂದು ಪರ್ಲಾಂಗು ದೂರದ ಕಾಳೇನಹಳ್ಳಿ ಶೆಡ್ಡು ಗ್ರಾಮಕ್ಕೆ ಬಂದು ವಿಷಯ ತಿಳಿಸಿದ್ದು, ಜನರು ಅಲ್ಲಿಗೆ ಹೋಗುವಷ್ಟರಲ್ಲಿ ಯುವತಿಯರ ಮೃತಪಟ್ಟಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಶವಗಳನ್ನು ನೀರಿನಿಂದ ಮೇಲೆ ತೆಗೆದಿದ್ದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಸಿಪಿಐ ಬಿ.ಜಿ. ಕುಮಾರ್‌ ಭೇಟಿ ನೀಡಿದ್ದರು.

ADVERTISEMENT

ಬೇಲಿ ನಿರ್ಮಿಸಲು ಆಗ್ರಹ: ಕಾಳೇನಹಳ್ಳಿ ಶೆಡ್ಡು ಬಳಿ, ಸ.ನಂ. 21ರ ಗೋಮಾಳದಲ್ಲಿ ಕಲ್ಲು ಕ್ವಾರಿ ನಡೆಸಿ ಹಾಗೇ ಬಿಟ್ಟಿದ್ದು ಅದರಲ್ಲಿ ಹತ್ತಾರು ಅಡಿಗಳಷ್ಟ ನೀರು ತುಂಬಿಕೊಂಡಿದೆ. ಕಾಳೇನಹಳ್ಳಿ ಸುತ್ತ ಮುತ್ತ ಸಾಕಷ್ಟು ಕಡೆ ಇಂತಹ ನೀರು ತುಂಬಿದ ಅಪಾಯಕಾರಿ ಕಲ್ಲು ಕ್ವಾರಿಗಳಿವೆ. ಈ ಕ್ವಾರಿಗಳ ಸುತ್ತ ಬೇಲಿ ನಿರ್ಮಿಸಿದ್ದರೆ ಎರಡು ಜೀವಗಳು ಉಳಿಯತ್ತಿದ್ದವು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.