ಹಲಗೂರು: ಕ್ರೀಡಾ ಕ್ಷೇತ್ರವು ವಿದ್ಯಾರ್ಥಿಗಳಿಗೆ ಉತ್ತಮ ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳ ನಿರಂತರ ಮತ್ತು ಕಠಿಣ ಪ್ರಯತ್ನದಿಂದ ಮಾತ್ರ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ವಿ.ಈ.ಉಮಾ ಅಭಿಪ್ರಾಯಪಟ್ಟರು.
ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಅವರಣದಲ್ಲಿ 14 ವರ್ಷದೊಳಗಿನ ವಯೋಮಾನದ ವಿದ್ಯಾರ್ಥಿಗಳ ಹಲಗೂರು ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಕ್ರೀಡೆಗಳಲ್ಲಿ ಸ್ಪರ್ಧಿಗಳು ಸೋಲು ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಸಮನ್ವಯ ಅಧಿಕಾರಿ ಎಂ.ಕೆ.ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳು ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡಾಕೂಟಗಳು ನೆರವಾಗಲಿವೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಧೈರ್ಯ ಮತ್ತು ಸಾಹಸ ಮತ್ತು ನಾಯಕತ್ವದ ಗುಣ ವೃದ್ಧಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಕೆ. ಶಶಿಕಲಾ, ಉಪಾಧ್ಯಕ್ಷೆ ಲತಾ, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲೆ ಅನುರಾಧ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ್, ಸಿಆರ್‌ಪಿ. ಕೃಷ್ಣ, ಎ.ಎಸ್. ದೇವರಾಜು, ಅಭಿಜತ್ ಬಸವರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.