ಕೆ.ಆರ್.ಪೇಟೆ: ಕ್ರೀಡಾಕೂಟದಿಂದ ವಿದ್ಯಾರ್ಥಿಗಳಲ್ಲಿ ಸ್ನೇಹ–ಸಹಬಾಳ್ವೆ ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುವುದರಿಂದ ಪ್ರತಿಯೊಬ್ಬರೂ ತಮಗೆ ಇಷ್ಟವಾದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಶಾಸಕ ಎಚ್.ಟಿ.ಮಂಜು ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ಕದಂಬ ಪಿಯು ಕಾಲೇಜಿನ ಆತಿಥ್ಯದಲ್ಲಿ ಆಯೋಜಿಸಲಾಗಿದ್ದ ತಾಲ್ಲೂಕು ಪಿಯು ಕಾಲೇಜುಗಳ ಎರಡು ದಿನದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಯ ಸ್ಮರಣೆ, ಗಮನ ಮತ್ತು ಕಲಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದರಿಂದ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಬಹುದು. ನಾನೂ ಕೂಡ ಕಾಲೇಜು ಮಟ್ಟದಲ್ಲಿ ಕಬಡ್ಡಿ ಪಟುವಾಗಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದೆ. ಅಂದು ನಾನು ಗಳಿಸಿಕೊಂಡ ಆತ್ಮವಿಶ್ವಾಸ, ದೃಡತೆ ಇಂದು ಸಹಕಾರಿಯಾಗಿದೆ ಎಂದು ಹೇಳಿದರು.
ಸೋಲು–ಗೆಲುವನ್ನು ಸಮನಾಗಿ ಸ್ವೀಕರಿಸುವ ಪರಿಪಾಠ ಮೂಡಲಿ. ವಿದ್ಯಾರ್ಥಿಗಳು ಕ್ರೀಡಾ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಯಶಸ್ವಿ ಕ್ರೀಡಾಪಟುವಾಗುವಂತೆ ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಗೆದ್ದವರು ಮತ್ತು ಸೋತವರು ಕ್ರೀಡಾಧರ್ಮವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಯಶಸ್ವಿ ಕ್ರೀಡಾಪಟು ಆಗಬೇಕೆಂದರು. ರಾಜ್ಯ ಸಹಕಾರ ಮಹಾ ಮಂಡಲದ ನಿರ್ದೇಶಕ ಶೀಳನೆರೆ ಎಸ್.ಎಲ್. ಮೋಹನ್ ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಕ್ರೀಡಾ ಸ್ಫೂರ್ತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಫಲಿತಾಂಶಕ್ಕೆ ಆದ್ಯತೆ ನೀಡದೆ ಹೆಚ್ಚು ಹೆಚ್ಚು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆನೀಡಿದರು.
ಕ್ರೀಡಾಕೂಟದ ಆತಿಥ್ಯ ವಹಿಸಿರುವ ಕದಂಬ ಕಾಲೇಜಿನ ಪ್ರಾಂಶುಪಾಲ ಎಸ್. ಮಂಜುನಾಥ್ ಮತ್ತು ಕಾರ್ಯದರ್ಶಿ ಡಿ.ಜೆ .ಕಿರಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಕೆ. ಮೋಹನ್, ಕೆಪಿಎಸ್ ಶಾಲೆಯ ಪ್ರಾಂಶುಪಾಲ ಪುಲಿಗೆರಯ್ಯ, ಕಿಕ್ಕೇರಿ ಕೆಪಿಎಸ್ ಶಾಲೆಯ ಸಹದೇವ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಚ್.ಟಿ.ಗಿರೀಶ್, ಬಡ್ತಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಆರ್. ರಮೇಶ್, ಪ್ರಾಂಶುಪಾಲರ ಸಂಘದ ತಾಲ್ಲೂಕು ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಸಹ ಕಾರ್ಯದರ್ಶಿ ಶಫಿ, ಮಲ್ಲಿಕಾರ್ಜುನ್, ಸಂಘಟನಾ ಕಾರ್ಯದರ್ಶಿ ರಘುಪತಿ, ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಎಲ್. ಮಂಜುನಾಥ್, ಸಾಹಿತಿ ಮಂಜುನಾಥ್, ಕಾರ್ಯಾಧ್ಯಕ್ಷ ಬಿ.ಜಿ.ರವೀಂದ್ರ, ಪ್ರದಾನ ಕಾರ್ಯದರ್ಶಿ ವೆಂಕಟೇಗೌಡ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಸಿ.ಲೋಕೇಶ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಭುಕುಮಾರ್, ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಪಟು ಜಿ. ಎನ್ ವಿಜಯಕುಮಾರಿ, ಕದಂಬ ಕಾಲೇಜಿನ ಡಿ.ಜೆ ಕಿರಣ್, ಬಿ.ಸಿ.ಕೃಷ್ಣ, ಕೆ.ಸಿ.ಜಯೇಶ್, ಕಲ್ಪನಾ ನಾಗೇಶ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿರುವ ತಾಲ್ಲೂಕಿನ ಕ್ರಿಡಾಪಟು ವಿಜಯಕುಮಾರಿಯನ್ನು ಶಾಸಕರು ಮತ್ತು ಗಣ್ಯರು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.