ಶ್ರೀರಂಗಪಟ್ಟಣ: ತಾಲ್ಲೂಕಿನ ಬಲ್ಲೇನಹಳ್ಳಿ, ಕೂಡಲಕುಪ್ಪೆ, ಚಂದಗಿರಿಕೊಪ್ಪಲು ಮಾರ್ಗವಾಗಿ ಮೈಸೂರು ಮತ್ತು ಶ್ರೀರಂಗಪಟ್ಟಣಕ್ಕೆ ಹೋಗಲು ಸಕಾಲಕ್ಕೆ ಸಾರಿಗೆ ಸಂಸ್ಥೆ ಬಸ್‌ಗಳು ಬಾರದ ಕಾರಣ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಈ ಮಾರ್ಗದ ಗ್ರಾಮಗಳಿಂದ ಬೆಳಿಗ್ಗೆ ಸಮಯದಲ್ಲಿ ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹೆಚ್ಚು ಬವಣೆಪಡುತ್ತಿದ್ದಾರೆ. ಚಂದಗಿರಿಕೊಪ್ಪಲು ಗ್ರಾಮದಿಂದ ಬೆಳಿಗ್ಗೆ 8 ಗಂಟೆಗೆ ಹೊರಡುವ ಬಸ್ ಬಲ್ಲೇನಹಳ್ಳಿಗೆ ಬರುವಷ್ಟರಲ್ಲಿ ಭರ್ತಿಯಾಗಿರುತ್ತದೆ. ಹನುಮಂತನಗರ ಮತ್ತು ಕೂಡಲಕುಪ್ಪೆ ಗ್ರಾಮಗಳಲ್ಲಿ ಬಸ್‌ಗಾಗಿ ಕಾಯುತ್ತಾ ನಿಲ್ಲುವವರಿಗೆ ಸ್ಥಳಾವಕಾಶವೇ ಇರುವುದಿಲ್ಲ. ತುರ್ತಾಗಿ ಹೋಗಬೇಕಾದವರು ಬಾಗಿಲಲ್ಲಿ ನಿಂತು, ಅಪಾಯಕಾರಿ ರೀತಿಯಲ್ಲಿ ನಿಂತುಕೊಂಡು ಹೋಗುತ್ತಿದ್ದಾರೆ. ಸ್ವಲ್ಪ ಆಯ ತಪ್ಪಿದರೂ ಕೆಳಕ್ಕೆ ಬೀಳುವ ಅಪಾಯವಿದೆ.
‘ಬೆಳಿಗ್ಗೆ 8 ಗಂಟೆಯ ಬಸ್‌ನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬುವುದರಿಂದ ಗಲಾಟೆ, ವಾಗ್ವಾದಗಳು ನಿತ್ಯದ ಸಂಗತಿಯಾಗಿವೆ. ಮುಖ್ಯವಾಗಿ ವಿದ್ಯಾರ್ಥಿಗಳು ಸಕಾಲಕ್ಕೆ ತರಗತಿಗಳಿಗೆ ತೆರಳಲು ಆಗದೆ ಪಾಠ, ಪ್ರವಚನಗಳಿಂದ ವಂಚಿತರಾಗುತ್ತಿದ್ದಾರೆ. ಆಸ್ಪತ್ರೆ, ಕಚೇರಿ ಇತರ ಕೆಲಸಗಳಿಗೆ ಹೋಗುವವರಿಗೂ ತೊಂದರೆಯಾಗುತ್ತಿದೆ’ ಎಂದು ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ಚಂದಗಿರಿಕೊಪ್ಪಲು ಜ್ಞಾನೇಶ್ ಸಮಸ್ಯೆ ತೆರೆದಿಟ್ಟರು.
‘ಬೆಳಿಗ್ಗೆ 8 ಗಂಟೆಗೆ ಬರುವ ಬಸ್ ಬಿಟ್ಟರೆ 10.30ರ ವರೆಗೆ ಈ ಮಾರ್ಗದಲ್ಲಿ ಬಸ್‌ಗಳು ಬರುವುದಿಲ್ಲ. ಖಾಸಗಿ ವಾಹನಗಳ ಸಂಚಾರವೂ ಇಲ್ಲ. ಬೆಳಿಗ್ಗೆ ಬರುವ ಬಸ್‌ನಲ್ಲಿ ಸ್ಥಳಾವಕಾಶ ಸಿಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದು, ವಾರದಲ್ಲಿ ಎರಡು, ಮೂರು ದಿನ ತರಗತಿ ತಪ್ಪಿಸಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ 8.30 ಮತ್ತು 9 ಗಂಟೆ ಸಮಯದಲ್ಲಿಯೂ ಈ ಮಾರ್ಗದಲ್ಲಿ ಬಸ್‌ಗಳನ್ನು ಓಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ಕಳೆದ ಎರಡು ವರ್ಷಗಳಿಂದ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆ. ದೊಡ್ಡವರು ಹೇಗೋ ನುಸುಳಿಕೊಂಡು ಬಸ್ ಹತ್ತಿ ಜೋತಾಡುತ್ತಾ ಶ್ರೀರಂಗಪಟ್ಟಣ, ಮೈಸೂರಿಗೆ ಹೋಗುತ್ತಾರೆ. ಪ್ರಾಥಮಿಕ ಶಾಲೆ ಮಕ್ಕಳು, ವೃದ್ಧರು ಮತ್ತು ರೋಗಿಗಳು ಬಸ್‌ಗೆ ಹತ್ತಲಾಗುತ್ತಿಲ್ಲ. ಬೆಳಿಗ್ಗೆ ಸಮಯದಲ್ಲಿ ಅರ್ಧ ಗಂಟೆಗೆ ಒಂದರಂತೆ ಬಸ್‌ಗಳನ್ನು ಓಡಿಸಬೇಕು’ ಎಂದು ಬಲ್ಲೇನಹಳ್ಳಿಯ ಬಿ.ಸಿ. ಸಂತೋಷಕುಮಾರ್, ಕೂಡಲಕುಪ್ಪೆ ಸೋಮಶೇಖರ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.