ADVERTISEMENT

ಮಳವಳ್ಳಿ | ಹೊಸ ಕಟ್ಟಡ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು

ಮಾಧ್ಯಮಿಕ ಶಾಲಾ ಕಟ್ಟಡದಲ್ಲಿ ಪ್ರಥಮ ದರ್ಜೆ ಕಾಲೇಜು

ಟಿ.ಕೆ.ಲಿಂಗರಾಜು
Published 1 ಆಗಸ್ಟ್ 2024, 6:38 IST
Last Updated 1 ಆಗಸ್ಟ್ 2024, 6:38 IST
ಮಳವಳ್ಳಿ ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜು
ಮಳವಳ್ಳಿ ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜು   

ಮಳವಳ್ಳಿ: ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಸ್ವಂತ ಕಟ್ಟಡ, ಮೂಲ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಗೋಳು ಹೇಳತೀರದಾಗಿದೆ.

ತಾಲ್ಲೂಕಿಗೆ ಮಂಜೂರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 1996-97ನೇ ಸಾಲಿನಲ್ಲಿ ಪಟ್ಟಣದಲ್ಲಿ ಪ್ರಾರಂಭಗೊಂಡಿತ್ತು. ತದನಂತರ 2006-07ನೇ ಸಾಲಿನಲ್ಲಿ ತಾಲ್ಲೂಕು ಕೇಂದ್ರದಿಂದ 8 ಕಿ.ಮೀ. ದೂರದ ಬಾಚನಹಳ್ಳಿಯಲ್ಲಿ ಮೂಲ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಸ್ವಂತ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಗೊಂಡಿತ್ತು. ಸಾರಿಗೆ ಸೌಲಭ್ಯ ಸೇರಿದಂತೆ ನಾನಾ ವಿಚಾರಗಳಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಕುಸಿತ ಕಂಡು ಕಾಲೇಜು ಮುಚ್ಚುವ ಹಂತಕ್ಕೆ ತಲುಪಿತು.

2017-18ರಲ್ಲಿ ಕೇವಲ 23 ವಿದ್ಯಾರ್ಥಿಗಳಿದ್ದ ಕಾಲೇಜನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡಿದ ಅಂದಿನ ಪ್ರಭಾರ ಪ್ರಾಂಶುಪಾಲ ಕೆ.ಟಿ. ವೆಂಕಟೇಶ್ ಅವರ ಮುಂದಾಲೋಚನೆಯಿಂದ ಪಟ್ಟಣದ ಮಾಧ್ಯಮಿಕ ಶಾಲಾ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ತದನಂತರ ಹಳೆಯ ವಿದ್ಯಾರ್ಥಿಗಳು, ಶಿಕ್ಷಣಾಸ್ತಕರ ತಂಡ ಕಟ್ಟಿಕೊಂಡ ಕೆ.ಟಿ. ವೆಂಕಟೇಶ್ ಮತ್ತು ಇತರ ಉಪನ್ಯಾಸಕರು ವಿದ್ಯಾರ್ಥಿಗಳು ದಾಖಲಾತಿ ಹೆಚ್ಚಳಕ್ಕೆ ಮುಂದಾದರು.

ADVERTISEMENT

ಹಂತ ಹಂತವಾಗಿ 2017-18ರಲ್ಲಿ 56, 2018-19ರಲ್ಲಿ 130, 2019-20ರಲ್ಲಿ 200, 2020-21ರಲ್ಲಿ 220, 2021-22ರಲ್ಲಿ 241 ವಿದ್ಯಾರ್ಥಿಗಳು ದಾಖಲಾಗಿ ಕಾಲೇಜು ಪುನಶ್ಚೇತಗೊಂಡಿತ್ತು. ಮುಚ್ಚುವ ಹಂತಕ್ಕೆ ತಲುಪಿದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿಯು ಕಾಲೇಜು ಶಿಕ್ಷಣ ಇಲಾಖೆಗೆ ಭರವಸೆಯನ್ನು ಮೂಡಿಸಿ, ಗಟ್ಟಿಯಾಗಿ ನೆಲೆಯೂರಿತು.

ಈಗ ವಿದ್ಯಾರ್ಥಿಗಳು ಹೆಚ್ಚುತ್ತಿರುವ ಕಾರಣ ಸ್ಥಳಾವಕಾಶದ ಕೊರತೆಯಾಗಿ ಪೋಷಕರು ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸಲು ಹಿಂದೇಟು ಹಾಕುವಂತಾಗಿದೆ. 2017-18ರಿಂದ ಇಲ್ಲಿಯವರೆಗೂ ಜಾಗ ಮಂಜೂರಾತಿ, ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಅಂದಿನ ಹಾಗೂ ಇಂದಿನ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹತ್ತಾರು ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸ್ತುತ 2023-24ನೇ ಸಾಲಿನಲ್ಲಿ 178 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಇದ್ದಾರೆ.

ಇದಲ್ಲದೆ ಸುಸಜ್ಜಿತ ಕಾಲೇಜು ಕಟ್ಟಡಕ್ಕಾಗಿ ಪಟ್ಟಣದಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೇರಿದ 5 ಎಕರೆ 7 ಗುಂಟೆ ಜಾಗದಲ್ಲಿ ಒಂದು ಎಕರೆ ಜಮೀನು ಮಂಜೂರು ಮಾಡುವಂತೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮಹೇಶ್ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಶಾಸಕರು ಮುತುವರ್ಜಿ ವಹಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಎಂಬ ನಿರೀಕ್ಷೆಯಲ್ಲಿದ್ದಾರೆ.

ಮಳವಳ್ಳಿ ತಾಲ್ಲೂಕಿನ ಬಾಚನಹಳ್ಳಿಯಲ್ಲಿ ಇರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸುಸಜ್ಜಿತ ಸ್ವಂತ ಕಟ್ಟಡ

ಆರಂಭದಲ್ಲಿ 23 ವಿದ್ಯಾರ್ಥಿಗಳಿದ್ದ ಕಾಲೇಜು ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ 178 ವಿದ್ಯಾರ್ಥಿಗಳು ಒಂದು ಎಕರೆ ಜಾಗಕ್ಕೆ ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ

ಸ್ಥಳಾಂತರಕ್ಕೆ ಹೊಸ ಚಿಂತನೆ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಜಾಗ ಮತ್ತು ಹೊಸ ಕಟ್ಟಡ ನಿರ್ಮಾಣ ಸಂಬಂಧ ಈಗಾಗಲೇ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಕಳೆದ ಆರೇಳು ತಿಂಗಳಿಂದ ನಾಲ್ಕೈದು ಬಾರಿ ವಿವಿಧ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದಾರೆ. ಸದ್ಯದಲ್ಲಿಯೇ ಸ್ಥಳಾಂತರವಿಲ್ಲವೇ ಹೊಸ ಕಟ್ಟಡಕ್ಕೆ ಮುಂದಾಗಲಿದ್ದಾರೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು’ ಎಂದು ಕಾಲೇಜು ಅಭಿವೃದ್ಧಿ ಕಾರ್ಯಾಧ್ಯಕ್ಷ ಬಿ.ಕೆ. ರವೀಂದ್ರ ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.