ADVERTISEMENT

ಶ್ರೀರಂಗಪಟ್ಟಣ | ‘ಕಾರ್ಖಾನೆ’ ದೂಳು: ತಪ್ಪದ ಗೋಳು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 5:41 IST
Last Updated 11 ಆಗಸ್ಟ್ 2025, 5:41 IST

ಶ್ರೀರಂಗಪಟ್ಟಣ ತಾಲ್ಲೂಕಿನ ನೆಲಮನೆ ಗ್ರಾಮದ ಮನೆಯೊಂದರಲ್ಲಿ ಬಿದ್ದಿರುವ ಸಕ್ಕರೆ ಕಾರ್ಖಾನೆಯ ದೂಳು

ಶ್ರೀರಂಗಪಟ್ಟಣ ತಾಲ್ಲೂಕಿನ ನೆಲಮನೆ ಗ್ರಾಮದ ಮನೆಯೊಂದರಲ್ಲಿ ಬಿದ್ದಿರುವ ಸಕ್ಕರೆ ಕಾರ್ಖಾನೆಯ ದೂಳು

ಶ್ರೀರಂಗಪಟ್ಟಣ: ತಾಲ್ಲೂಕಿನ ದರಸಗುಪ್ಪೆ ಗಡಿಗೆ ಹೊಂದಿಕೊಂಡಿರುವ ಸಕ್ಕರೆ ಕಾರ್ಖಾನೆಯಿಂದ ಹೊರ ಹೊಮ್ಮುವ ಅಪಾಯಕಾರಿ ದೂಳು ಹತ್ತಾರು ಊರುಗಳ ಜನರ ಉಸಿರು ಕಟ್ಟಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ADVERTISEMENT

ಕಾರ್ಖಾನೆಯ ಚಿಮಣಿಯಿಂದ ಬರುವ ದೂಳು ಏಳೆಂಟು ಕಿ.ಮೀ. ಫಾಸಲೆ ಯಲ್ಲಿರುವ ಗ್ರಾಮಗಳಿಗೆ ಬೀಳುತ್ತಿದೆ. ತಾಲ್ಲೂಕಿನ ದರಸಗುಪ್ಪೆ, ಕಪರನಕೊಪ್ಪಲು, ನೆಲಮನೆ, ಬಲ್ಲೇನಹಳ್ಳಿ, ಕೂಡಲಕುಪ್ಪೆ, ಹನುಮಂತನಗರ, ಕೆಂಪೇಗೌಡನಕೊಪ್ಪಲು, ಚಂದಗಿರಿಕೊಪ್ಪಲು, ಸಬ್ಬನಕುಪ್ಪೆ, ಮಲ್ಲೇಗೌಡನಕೊಪ್ಪಲು, ಕಿರಂಗೂರುವರೆಗೂ ದೂಳು ಹರಡುತ್ತಿದೆ. ಕಾರ್ಖಾನೆ ಶುರುವಾದರೆ ಜನರ ಸಂಕಟವೂ ಶುರುವಾಗುತ್ತದೆ. ದೂಳು ಬೀಳುವುದನ್ನು ತಪ್ಪಿಸಿಕೊಳ್ಳಲು ಕಿಟಕಿ, ಬಾಗಿಲುಗಳನ್ನು ಮುಚ್ಚಿಕೊಳ್ಳುವ ಪರಿಸ್ಥಿತಿ ಬಂದಿದೆ. ಹೊಚ್ಚ ಹೊಸ ಮನೆಗಳಿಗೂ ಕಾರ್ಖಾನೆಯ ಮಸಿ ಮೆತ್ತಿಕೊಳ್ಳುತ್ತಿದೆ.

ಹೆಂಚಿನ ಮನೆಗಳಲ್ಲಿ ವಾಸ ಮಾಡುವವರು ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೆಂಚುಗಳ ಸಂದಿಯಲ್ಲಿ ಮನೆಯ ಒಳಕ್ಕೆ ಬೀಳುವ ದೂಳಿನಿಂದ ಕುಡಿಯುವ ನೀರು, ಆಹಾರ ಕಲುಷಿತವಾಗುತ್ತಿದೆ. ಈ ಗ್ರಾಮಗಳ ಜನರು ಮನೆಯ ಹೊರಗೆ ಬಟ್ಟೆ ಒಣ ಹಾಕುವುದನ್ನೇ ಬಿಟ್ಟಿದ್ದಾರೆ.

ಆರೋಗ್ಯ ಸಮಸ್ಯೆ: ಸಕ್ಕರೆ ಕಾರ್ಖಾನೆಯ ದೂಳು ಗಾಳಿಯನ್ನು ಕಲುಷಿತ ಮಾಡುತ್ತಿದೆ. ವಾಯು ಮಾಲಿನ್ಯದಿಂದಾಗಿ ಜನರು ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಸ್ತಮಾ ರೋಗಿಗಳ ಪಾಡು ಹೇಳತೀರದಾಗಿದೆ. ಉಸಿರಾಟದ ಸಮಸ್ಯೆ, ಕೆಮ್ಮು, ವಾಕರಿಯಂತಹ ಸಮಸ್ಯೆಗಳು ಕಾಡುತ್ತಿವೆ. ಮನೆಯಿಂದ ಹೊರ ಬಂದರೆ ದೂಳು ಕುಡಿಯಬೇಕು ಎಂಬ ಕಾರಣಕ್ಕೆ ಜನರು ವಾಯು ವಿಹಾರಕ್ಕೆ ಹೋಗುವುದನ್ನೇ ಬಿಟ್ಟಿದ್ದಾರೆ.

ಕೃಷಿಗೂ ಮಾರಕ: ಕಾರ್ಖಾನೆಯ ದೂಳು ಬೆಳೆಗಳ ಮೇಲೂ ಬೀಳುತ್ತಿರುವುದರಿಂದ ಚಿಗುರು ಕಮರುತ್ತಿವೆ. ಕಾಕಡ, ಚೆಂಡು, ಕನಕಾಂಬರ, ಗುಲಾಬಿ ಹೂವಿನ ತೋಟಗಳಿಗೆ ಕಪ್ಪು ದೂಳು ಬೀಳುವುದರಿಂದ ಹೂವುಗಳು ತಾಜಾತನ ಕಳೆದುಕೊಳ್ಳುತ್ತಿವೆ. ಇದರಿಂದ ಪುಷ್ಪ ಕೃಷಿ ಮಾಡುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೂವುಗಳನ್ನು ಗಿಡದಲ್ಲೇ ಬಿಡುವ ಪರಿಸ್ಥಿತಿ ಬಂದಿದೆ. ಕಬ್ಬು, ತರಕಾರಿ, ಬತ್ತದ ಬೆಳೆಗಳ ಮೇಲೂ ದೂಳು ಬೀಳುತ್ತಿದ್ದು ರೈತರಿಗೆ ಮಾರಕವಾಗಿ ಪರಿಣಮಿಸಿದೆ. ಹುಲ್ಲಿನ ಮೇಲೆ ದೂಳು ಬೀಳುವುದರಿಂದ ಜಾನುವಾರುಗಳು ಸರಿಯಾಗಿ ಮೇವು ತಿನ್ನುತ್ತಿಲ್ಲ. ಪಶುಪಾಲಕರು ಒಣ ಹುಲ್ಲಿನ ಬಣವೆಗಳ ಮೇಲೆ ಟಾರ್ಪಾಲಿನ್‌ ಹೊದಿಸಿ ದೂಳಿನಿಂದ ರಕ್ಷಿಸಿಕೊಳ್ಳುತ್ತಿದ್ದಾರೆ. ಕಾರ್ಖಾನೆಗೆ ಹತ್ತಿರ ಇರುವವರು ತಮ್ಮ ಜಮೀನಿನಲ್ಲಿ ಬೆಳೆದಿರುವ ಹಸಿರು ಮೇವನ್ನು ನೀರಿನಲ್ಲಿ ತೊಳೆದು ರಾಸುಗಳಿಗೆ ಹಾಕುತ್ತಿದ್ದಾರೆ.

‘ಸಕ್ಕರೆ ಕಾರ್ಖಾನೆಯಿಂದ ಬರುವ ದೂಳು ವಿವಿಧ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ವೃದ್ಧರು ಮತ್ತು ರೋಗಿಗಳು ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ. ದೂಳು ಹರಡುವುದನ್ನು ತಡೆಯುವಂತೆ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ’
-ಸಿ.ಎಂ. ಜ್ಞಾನೇಶ್, ಚಂದಗಿರಿಕೊಪ್ಪಲು
‘ಕಾರ್ಖಾನೆಯಿಂದ ಬರುವ ಕಪ್ಪು ದೂಳು ಮನೆಗಳ ಒಳಕ್ಕೂ ಬರುತ್ತಿದೆ. ಆಹಾರ ಮತ್ತು ನೀರಿಗೂ ಬೀಳುತ್ತಿದೆ. ಸಿಹಿ ಕೊಡುವ ಕಾರ್ಖಾನೆ ಕಹಿಯ ವಾತಾವರಣ ಉಂಟುಮಾಡುತ್ತಿದೆ. ದೂಳು ಹರಡುವುದನ್ನು ತಡೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ತಕ್ಷಣ ಕ್ರಮ ವಹಿಸಬೇಕು’
-ನೆಲಮನೆ ಬಿ. ಚಲುವೇಗೌಡ, ಅಧ್ಯಕ್ಷರು, ಪಿಕಾರ್ಡ್‌ ಬ್ಯಾಂಕ್‌
‘ಕಾರ್ಖಾನೆಯಿಂದ ಬರುವ ದೂಳಿನಿಂದ ಸಮಸ್ಯೆ ಉಂಟಾಗುತ್ತಿರುವ ವಿಷಯವನ್ನು ಆಸುಪಾಸಿನ ಗ್ರಾಮಗಳ ಜನರು ಗಮನಕ್ಕೆ ತಂದಿದ್ದಾರೆ. ಅದನ್ನು ತಡೆಯಲು ಕಾಲಾವಕಾಶ ಬೇಕಾಗುತ್ತದೆ. ಈ ಬಗ್ಗೆ ಕಾರ್ಖಾನೆಯ ಮಾಲೀಕರ ಜತೆ ಚರ್ಚಿಸಲಾಗುವುದು’
-ರವಿ, ಪ್ರಧಾನ ವ್ಯವಸ್ಥಾಪಕ, ನಿರಾಣಿ ಶುಗರ್ಸ್‌ ಪ್ರೈ. ಲಿಮಿಟೆಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.