ADVERTISEMENT

ಭಾರತೀನಗರ: ಸೂಳೆಕೆರೆ ಒತ್ತುವರಿ ತೆರವಿಗೆ ರೈತರ ಆಗ್ರಹ

ಕೆರೆ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆ; ಸಮಾಲೋಚನಾ ಸಭೆ ನಡೆಸಿದ ಶಾಸಕ ಕೆ.ಎಂ. ಉದಯ್‌

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 3:06 IST
Last Updated 17 ಅಕ್ಟೋಬರ್ 2025, 3:06 IST
ಭಾರತೀನಗರ ಸಮೀಪದ ಚಿಕ್ಕರಸಿನಕೆರೆ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಸೂಳೆಕೆರೆ ಜೀರ್ಣೋದ್ಧಾ, ನಾಲೆಗಳ ಅಭಿವೃದ್ಧಿ ಕಾಮಗಾರಿ ಕುರಿತ ರೈತ ಮುಖಂಡರ ಸಮಾಲೋಚನೆ ಸಭೆಯನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು 
ಭಾರತೀನಗರ ಸಮೀಪದ ಚಿಕ್ಕರಸಿನಕೆರೆ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಸೂಳೆಕೆರೆ ಜೀರ್ಣೋದ್ಧಾ, ನಾಲೆಗಳ ಅಭಿವೃದ್ಧಿ ಕಾಮಗಾರಿ ಕುರಿತ ರೈತ ಮುಖಂಡರ ಸಮಾಲೋಚನೆ ಸಭೆಯನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು    

ಭಾರತೀನಗರ: ಸೂಳೆಕೆರೆಯ ನೂರಾರು ಎಕರೆಯಷ್ಟು ಜಾಗವನ್ನು ಅಕ್ಕಪಕ್ಕದ ರೈತರು ಒತ್ತುವರಿ ಮಾಡಿಕೊಂಡಿದ್ದು, ಮೊದಲು ಒತ್ತುವರಿಯನ್ನು ತೆರವುಗೊಳಿಸಿ ಆನಂತರ ಜೀರ್ಣೋದ್ಧಾರ ಕೈಗೊಳ್ಳುವಂತೆ ರೈತರು ಆಗ್ರಹಿಸಿದರು.

ಸಮೀಪದ ಚಿಕ್ಕಅರಸಿನಕೆರೆ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಮಂಗಳವಾರ ನಡೆದ ಸೂಳೆಕೆರೆ ಜೀರ್ಣೋದ್ಧಾರ ಹಾಗೂ ನಾಲೆಗಳ ಅಭಿವೃದ್ಧಿ ಕಾಮಗಾರಿ ಕುರಿತು ರೈತ ಮುಖಂಡರ ಜೊತೆ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಶಾಸಕ ಉದಯ್‌ ಸಮ್ಮುಖದಲ್ಲಿ ರೈತರು ಈ ಒತ್ತಾಯ ಮಾಡಿದರು.

ಕಳೆದ ಹತ್ತಾರು ವರ್ಷಗಳ ಹಿಂದೆಯೇ ಕೆರೆ ಒತ್ತುವರಿ ಮಾಡಿಕೊಂಡಿದ್ದು, ಈ ಹಿಂದಿನ ಯಾವ ಸರ್ಕಾರಗಳೂ ಕೆರೆ ಉಳಿವಿಗೆ ಕ್ರಮಕೈಗೊಂಡಿಲ್ಲ. ಈಗಲಾದರೂ 400 ಎಕರೆಗೂ ಹೆಚ್ಚು ಒತ್ತುವರಿಯಾಗಿರುವ ಕೆರೆಗೆ ಸೇರಿ ಜಾಗವನ್ನು ತೆರವುಗೊಳಿಸಿ, ಆನಂತರ ಅಭಿವೃದ್ಧಿಪಡಿಸಿ ಎಂದು ಸಲಹೆ ನೀಡಿದರು.

ADVERTISEMENT

ಸಭೆ ಉದ್ಘಾಟಿಸಿದ ಶಾಸಕ ಕೆ.ಎಂ.ಉದಯ್‌ ಮಾತನಾಡಿ, ಸೂಳೆಕೆರೆ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುತ್ತಿದೆ. ಮೊದಲು ಒತ್ತುವರಿಯಾಗಿರುವ ಕೆರೆ ಜಾಗ ಬಿಡಿಸಿ ನಂತರ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಸೂಳೆಕೆರೆ ಅಚ್ಚುಕಟ್ಟು ವ್ಯಾಪ್ತಿಯ ರೈತರು ಹಲವು ವರ್ಷಗಳಿಂದ ಶಿಥಿಲ ನಾಲೆಗಳಿಂದಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರೈತರ ಸಲಹೆ ಅಗತ್ಯ. ರೈತರ ಸಲಹೆಗಳಿಗೆ ಅನುಗುಣವಾಗಿ ಕೆಲಸ ಮಾಡಲು ಬದ್ಧ ಎಂದು ಹೇಳಿದರು.

ಸೂಳೆಕೆರೆಯ ವಿಸ್ತೀರ್ಣ 845 ಎಕೆರೆ ಇದ್ದು, ಕೆಲವರು ಇದನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ತೆರವಿಗೆ ಕ್ರಮವಹಿಸುತ್ತೇನೆ. ಸೂಳೆಕೆರೆ ಅಭಿವೃದ್ಧಿ ಕಾಮಗಾರಿಗೆ ಅಂದಾಜು ಮೊತ್ತ ಸುಮಾರು ₹34 ಕೋಟಿ ಮತ್ತು ಸೂಳೆಕೆರೆ ನಾಲೆಗಳ ಅಭಿವೃದ್ಧಿಗೆ ಅಂದಾಜು ಮೊತ್ತ ₹47.75 ಕೋಟಿ ಬಿಡುಗಡೆಯಾಗಿದೆ. ಈ ಹಣದಲ್ಲಿ ಉತ್ತರ ಮತ್ತು ದಕ್ಷಿಣ ಎರಡು ಭಾಗದ ನಾಲೆಗಳ ಅಭಿವೃದ್ಧಿ ಕಾಮಗಾರಿಯೂ ನಡೆಯಲಿದೆ ಎಂದು ತಿಳಿಸಿದರು.

ಜಿ.ಪಂ. ಮಾಜಿ ಅಧ್ಯಕ್ಷ ಬಿ.ಬಸವರಾಜು ಮಾತನಾಡಿದರು. ನೀರಾವರಿ ಇಲಾಖೆಯ ಅಧಿಕಾರಿಗಳು ಶಾಸಕ ಕೆ.ಎಂ. ಉದಯ್ ಅವರನ್ನು ಅಭಿನಂದಿಸಿ, ಗೌರವಿಸಿದರು.

ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ನಂಜುಂಡೇಗೌಡ, ಎಇಇ ಪ್ರಶಾಂತ್, ಎಇ ಅವಿನಾಶ್, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಮ್ಮ, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಚಂದ್ರಶೇಖರ್, ರಘು, ಶಿವಲಿಂಗಯ್ಯ, ದೇವರಹಳ್ಳಿ ದೊಡ್ಡೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.