ADVERTISEMENT

ಸುಮಲತಾ ಟೂರಿಂಗ್ ಟಾಕೀಸ್ ಆರಂಭ

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸಂಸದ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 3:08 IST
Last Updated 2 ಏಪ್ರಿಲ್ 2019, 3:08 IST
ಸುಮಲತಾ, ಸಂಸದ ಎಲ್.ಆರ್. ಶಿವರಾಮೇಗೌಡ
ಸುಮಲತಾ, ಸಂಸದ ಎಲ್.ಆರ್. ಶಿವರಾಮೇಗೌಡ    

ಕೊಪ್ಪ: ಜಿಲ್ಲೆಯಲ್ಲಿ ಸುಮಲತಾ ಟೂರಿಂಗ್ ಟಾಕೀಸ್ ಆರಂಭವಾಗಿದೆ. ಏ. 18 ರಂದು ಪ್ಯಾಕಪ್ ಆಗುತ್ತದೆ. ದರ್ಶನ್, ರಾಕ್‌ ಲೈನ್ ವೆಂಕಟೇಶ್ ಮತ್ತು ಸುಮಲತಾ ಅವರು ಯಾರು ಕೂಡ ಗೌಡರಲ್ಲ ಎಂದು ಸಂಸದ ಎಲ್.ಆರ್. ಶಿವರಾಮೇಗೌಡ ಎಂದು ಆರೋಪಿಸಿದರು.

ಕೊಪ್ಪದ ಶಾಶ್ವತಿ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಸುಮಲತಾ ಗೆದ್ದ ನಂತರ ಗಾಂಧಿ ನಗರದ ಯಾವ ಮೂಲೆಯಲ್ಲಿ ಹುಡುಕುವುದು. ಜಿಲ್ಲಾಧಿಕಾರಿಗೆ ಅನವಶ್ಯಕವಾಗಿ ಬೆದರಿಸುತ್ತಿದ್ದಾರೆ. ಇವರ ಸುತ್ತ ಬಾಡಿಗೆ ಅಭಿಮಾನಿಗಳಿದ್ದಾರೆ. ಮೇ 23ಕ್ಕೆ ಸುಮಲತಾ ಅವರ ಸಿನಿಮಾ ಡಬ್ಬಿ ಸೇರಲಿದೆ ಎಂದು ಲೇವಡಿ ಮಾಡಿದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ರಾಜಕೀಯ ಪ್ರಜ್ಞೆಯಿಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಾಮಪತ್ರ ಸಲ್ಲಿಸುವಾಗ ಸುಮಲತಾ ಅವರು ಹುಟ್ಟೆ ಇರಲಿಲ್ಲ. ಇವರಿಂದ ನಾಮಪತ್ರ ಹಾಕುವುದನ್ನು ಕಲಿಯಬೇಕೆ. ಆರ್‌ಎಸ್ಎಸ್ ಮತ್ತು ಬಿಜೆಪಿ ಅವರ ಮಾತುಗಳನ್ನು ಕೇಳಿಕೊಂಡು ಮೈತ್ರಿ ಪಕ್ಷದ ಅಭ್ಯರ್ಥಿ ಮತ್ತು ಜೆಡಿಎಸ್ ವರಿಷ್ಠರನ್ನು ದೂರುತ್ತಿದ್ದಾರೆ ಎಂದರು.

ದೇಶದಲ್ಲಿ ಕೋಮುವಾದಿಗಳನ್ನು ದೂರವಿಡಬೇಕು ಜಾತ್ಯಾತೀತ ಶಕ್ತಿಗಳು ಒಂದಾಗಬೇಕು ಎಂದು ದೇಶದಲ್ಲಿರುವ ಪ್ರಾದೇಶಿಕ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ. ದೇವೇಗೌಡರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ, ಇಲ್ಲವೆ ದೇವೇಗೌಡರು ಸೂಚಿಸಿದ ವ್ಯಕ್ತಿಯೇ ಪ್ರಧಾನಿಯಾಗುತ್ತಾರೆ. ಬಿಜೆಪಿ ಮನುವಾದಿಗಳಿಗೆ ಜಿಲ್ಲೆಯ ದಲಿತ, ಮುಸ್ಲಿಂ, ಕ್ರೈಸ್ತ ಮತ್ತು ರೈತರ ಮತಗಳು ಸಿಗುವುದಿಲ್ಲ. ಸುಮಲತಾ ಅಂಬರೀಷ್‌ ಅವರು ಠೇವಣಿಗಾಗಿ ಪರದಾಡಬೇಕಿದೆ ಎಂದು ಸುಮಲತಾ ಅವರ ವಿರುದ್ಧ ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಶಾಸಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಶಾಸಕ ಕೆ. ಸುರೇಶ್‌ಗೌಡ, ವಿಧಾನ ಪರಿಷತ್ ಸದಸ್ಯ ಎನ್. ಅಪ್ಪಾಜಿಗೌಡ, ಜಿ.ಪಂ ಸದಸ್ಯರಾದ ಎಂ. ಮರಿಹೆಗ್ಗಡೆ, ರೇಣುಕಾ ರಾಮಕೃಷ್ಣ, ತಾ.ಪಂ ಸದಸ್ಯ ಬಿದರಕೋಟೆ ಮೋಹನ್, ಮುಖಂಡರಾದ ನೆಲ್ಲಿಗೆರೆ ಬಾಲು, ಚಿಕ್ಕೊನಹಳ್ಳಿ ತಮ್ಮಯ್ಯ, ರಾಮಚಂದ್ರು, ತಮ್ಮಣ್ಣ ನಾಯಕ್, ಸಿದ್ದರಾಜು ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.