ಮಂಡ್ಯ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳಿಗೆ ಸಂಬಂಧಿಸಿದಂತೆ ಹೊಸ ಸಾಕ್ಷಿ ಪರಿಗಣಿಸುವುದು ಹಾಗೂ ಎಸ್‌ಐಟಿ ತನಿಖೆ ಮುಂದುವರಿಸಲು ಸರ್ಕಾರ ಆದೇಶ ನೀಡಬೇಕು ಎಂದು ಆಗ್ರಹಿಸಿ ಜಾಗೃತ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆ ಮುಖಂಡರು ನಗರದಲ್ಲಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.
ನಗರದ ಜೆ.ಸಿ. ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಮೇಣದ ಬತ್ತಿ ಹಿಡಿದು ಸೌಜನ್ಯ ಪರ ಘೋಷಣೆ ಕೂಗಿದರು.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ 400ಕ್ಕೂ ಹೆಚ್ಚು ಅಸಹಜ ಸಾವುಗಳ ಬಗ್ಗೆ ಕೂಲಂಕಶವಾದ, ಗಂಭೀರವಾದ ತನಿಖೆ ನಡೆಸಲು ಸರ್ಕಾರ ಸ್ಪಷ್ಟ ಆದೇಶ ನೀಡಬೇಕು. ಸೌಜನ್ಯ ಹತ್ಯೆ ಒಳಗೊಂಡಂತೆ ವೇದವಲ್ಲಿ, ಪದ್ಮಲತಾ, ಯಮುನಾ ಮತ್ತು ನಾರಾಯಣ ಅವರ ಹತ್ಯೆಗೂ ನ್ಯಾಯ ಒದಗಿಸಲು ಸರ್ಕಾರ ಬದ್ಧತೆ ತೋರಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣಗಳಲ್ಲಿ ತಪ್ಪಿಸಿಕೊಂಡಿರುವ ಅಪರಾಧಿಗಳನ್ನು ಪತ್ತೆಹಚ್ಚಲು ಸಮಗ್ರ ತನಿಖೆ ಕೈಗೊಳ್ಳುವಂತೆ ಎಸ್‌ಐಟಿಗೆ ಸ್ಪಷ್ಟ ಆದೇಶ ನೀಡಬೇಕು. ಇಲ್ಲಿ ಏನಾದರೂ ತಾಂತ್ರಿಕ ಅಡಚಣೆಗಳಿದ್ದರೆ ಸೂಕ್ತ ರೀತಿಯಲ್ಲಿ ನಿವಾರಿಸಿಕೊಳ್ಳಬೇಕು. ಇದು ಸರ್ಕಾರದ ಜವಾಬ್ದಾರಿ ಎನ್ನುವುದನ್ನು ಮರೆಯಬಾರದು ಎಂದು ಒತ್ತಾಯಿಸಿದರು.
ಈಗ ಮುಂದೆ ಬಂದಿರುವ ಹೊಸ ಸಾಕ್ಷಿದಾರರನ್ನು ಒಳಗೊಂಡು ಆಮೂಲಾಗ್ರವಾಗಿ ತನಿಖಾ ಪ್ರಕ್ರಿಯೆ ಮುಂದುವರಿಯಬೇಕು. ನ್ಯಾಯಕ್ಕಾಗಿ ದನಿ ಎತ್ತುವವರಿಗೆ ರಕ್ಷಣೆ ನೀಡುವುದು ಹಾಗೂ ಸಾಕ್ಷಿದಾರರಿಗೆ ಕಿರುಕುಳ ನೀಡುವುದು ನಿಲ್ಲಬೇಕು. ಧರ್ಮಸ್ಥಳದಲ್ಲಿ ಗೂಂಡಾಗಿರಿ ಮುಂದುವರಿಸಿರುವ ಶಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಎನ್.ನಾಗೇಶ್, ಪೃಥ್ವಿರಾಜ್, ಜಗದೀಶ್, ಸಂತೋಷ್, ಸುಬ್ರಹ್ಮಣ್ಯ, ಪ್ರಜ್ವಲ್, ಹರೀಶ್, ಬಿ.ಎಸ್.ಶಿಲ್ಪಾ, ಪೂರ್ಣಿಮಾ, ಹುರುಗಲವಾಡಿ ರಾಮಯ್ಯ, ಕೃಷ್ಣಪ್ರಕಾಶ್, ಶ್ರುತಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.