ಪಾಂಡವಪುರ: ಮಹಾತ್ಮಗಾಂಧೀಜಿ ಅವರ ‘ಸ್ವರಾಜ್’ ಕನಸಿಗೆ ಹೊರ ಹುರುಪು ತುಂಬಲು ಪಾಂಡವ ಕ್ರೀಡಾಂಗಣ ಸಜ್ಜುಗೊಂಡಿದೆ.
ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಶನ್ ಹಾಗ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ‘ಸ್ವರಾಜ್ ಉತ್ಸವ’ ಸೆ.13 ರಂದು ನಡೆಯಲಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾಮಾಜಿಕ ಕಳಕಳಿ ಹಾಗೂ ಕಲಾಭಿವ್ಯಕ್ತಿಗೆ ಹೆಸರಾಗಿರುವ ಬಾದಲ್ ನಂಜುಂಡಸ್ವಾಮಿ ಅವರು ಭಿತ್ತಿ ಪತ್ರಗಳನ್ನು ರಚಿಸಿದ್ದಾರೆ. ಯಾವುದೇ ಕಾರ್ಯಕ್ರಮ ನಡೆದರೆ, ಊರು ತುಂಬ ವೀನೈಲ್ ಬ್ಯಾನರ್‌ಗಳು, ಪ್ಲಾಸ್ಟಿಕ್ ಸಾಮಾಗ್ರಿಗಳು ರಾರಾಜಿಸುತ್ತವೆ. ಆದರೆ ಇಲ್ಲಿ ತ್ಯಾಜ್ಯ ಮುಕ್ತವಾದ ಕಾರ್ಯಕ್ರಮವಾಗಬೇಕೆಂಬ ಉದ್ದೇಶವಾಗಿದೆ. ಬಟ್ಟೆಯ ಬ್ಯಾನರ್‌ಗಳನ್ನು ಬಳಸಲಾಗುತ್ತಿದೆ.
ಬೆಳಿಗ್ಗೆ 9.30ರಿಂದ ಸಂಜೆ 5ವರೆಗೂ ನಡೆಯುವ ಉತ್ಸವದಲ್ಲಿ 10ಸಾವಿರಕ್ಕೂ ಅಧಿಕ ಗ್ರಾಮೀಣ ಪ್ರದೇಶದ ಜನರು ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ, ಸಂವಾದ, ಚರ್ಚೆ ನಡೆಯಲಿದೆ. ಭಾಗವಹಿಸುವವರಿಗೆಲ್ಲ ಊಟದ ವ್ಯವಸ್ಥೆ ಮಾಡಲಾಗಿದೆ.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು ಸ್ವರಾಜ್ಯಕಲ್ಪನೆಯನ್ನು ಸಾಕಾರಗೊಳಿಸಲು ಒಂದೆಡೆ ಸೇರುತ್ತಿರುವುದು ಇದೇ ಮೊದಲು ಎಂದು ಕಾರ್ಯಕ್ರಮದ ಸಂಯೋಜಕಿ ಕವಿತಾ ಕುರುಗುಂಟಿ ಹೇಳುತ್ತಾರೆ.
‘ಇದೊಂದು ವಿನೂತನ ಪ್ರಯತ್ನ, ಗ್ರಾಮೀಣ ವಿಕಾಸದ ದೃಷ್ಟಿಯಿಂದ ಇದು ಅಗತ್ಯವಾಗಿದೆ. ಈ ಕಾರ್ಯಕ್ರಮವು ಜನರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ ಎಂದು ನಂಬಿದ್ದೇನೆ ಎನ್ನುತ್ತಾರೆ ಶಾಸಕ ದರ್ಶನ್ ಪುಟ್ಟಣ್ಣಯ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.