ADVERTISEMENT

ಉನ್ನತ ಶಿಕ್ಷಣಕ್ಕೆ ಟ್ಯಾಬ್ಲೆಟ್‌ ಪಿಸಿ ಸಹಕಾರಿ: ಸಚಿವ ಕೆ.ಸಿ.ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 6:30 IST
Last Updated 24 ಜೂನ್ 2021, 6:30 IST
ಮಂಡ್ಯ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಅವರು ‍ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಗೆ ಸಾಂಕೇತಿಕವಾಗಿ ಟ್ಯಾಬ್ಲೆಟ್‌ ವಿತರಿಸಿದರು
ಮಂಡ್ಯ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಅವರು ‍ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಗೆ ಸಾಂಕೇತಿಕವಾಗಿ ಟ್ಯಾಬ್ಲೆಟ್‌ ವಿತರಿಸಿದರು   

ಮಂಡ್ಯ: ಟ್ಯಾಬ್ಲೆಟ್‌ ಪಿಸಿಗಳ ಮೂಲಕ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಉನ್ನತ ಸ್ಥಾನಕ್ಕೆ ತಲುಪಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಮಹಿಳಾ ಕಾಲೇಜು ಆಂತರಿಕ ಭರವಸೆ ಗುಣಮಟ್ಟ ಕೋಶದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಸ್ಮಾರ್ಟ್ ಕರ್ನಾಟಕ ಯೋಜನೆ ಅಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ಲೆಟ್‌ ಪಿಸಿ ವಿತರಿಸಿ, ಸ್ಮಾರ್ಟ್‌ ಕ್ಲಾಸ್ ರೂಂಉದ್ಘಾಟಿಸಿ ಅವರು ಮಾತನಾಡಿದರು.

‘ಕೊರೊನಾ ದುರಿತ ಕಾಲದಲ್ಲಿ ರಾಜ್ಯ ಸರ್ಕಾರ ತಂತ್ರಜ್ಞಾನದ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಶಿಕ್ಷಣ ಪಡೆಯಬೇಕು. ಮುಂದಿನ ವರ್ಷ ಕಾಲೇಜು ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲಿದೆ. ಪ್ರಸ್ತುತ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗಬೇಕು’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ಇದುವರೆಗೆ 3 ಮಕ್ಕಳು ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಮಕ್ಕಳು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಮಕ್ಕಳಿಗೆ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಲಾಗಿದ್ದು, 150 ಆಕ್ಸಿಜನ್ ಬೆಡ್‍ಗಳನ್ನು ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

ಶಾಸಕ ಎಂ. ಶ್ರೀನಿವಾಸ್, ಮುಡಾ ಅಧ್ಯಕ್ಷ ಶ್ರೀನಿವಾಸ್‌, ಪ್ರಾಂಶುಪಾಲ ಕೆ.ಬಿ.ನಾರಾಯಣ್‌, ಪ್ರಾಧ್ಯಾಪಕರಾದ ಹೇಮಾ, ಕೆಂಪಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.