ADVERTISEMENT

ಮಂಡ್ಯ ತಾಲ್ಲೂಕು ಆಸ್ಪತ್ರೆಗೆ ರೋಗಿಗಳ ದಾಖಲು

ಕೋವಿಡ್‌ ಲಕ್ಷಣ ಇಲ್ಲದ ರೋಗಿಗಳ ಸ್ಥಳಾಂತರ, ಕ್ವಾರಂಟೈನ್‌ ಕೇಂದ್ರಗಳ ಬಳಕೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 15:44 IST
Last Updated 27 ಜುಲೈ 2020, 15:44 IST
   

ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಜಿಲ್ಲಾಸ್ಪತ್ರೆಯ ಒತ್ತಡ ಕಡಿಮೆ ಮಾಡಲು ತಾಲ್ಲೂಕು ಆಸ್ಪತ್ರೆಯ ಕೋವಿಡ್‌ ವಾರ್ಡ್‌ಗಳಿಗೂ ಕೋವಿಡ್ ರೋಗಿಗಳನ್ನು ದಾಖಲು ಮಾಡಲಾಗುತ್ತಿದೆ.

ಮಳವಳ್ಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಕೋವಿಡ್‌ ವಾರ್ಡ್‌ ಆರಂಭವಾಗಿದ್ದು ಜುಲೈ 26ರಂದು 30 ರೋಗಿಗಳನ್ನು ದಾಖಲು ಮಾಡಲಾಗಿದೆ. ಈ ಆಸ್ಪತ್ರೆ 75 ಹಾಸಿಗೆ ಸಾಮರ್ಥ್ಯ ಹೊಂದಿದೆ. ಶ್ರೀರಂಗಪಟ್ಟಣ ಆಸ್ಪತ್ರೆ 50 ಹಾಸಿಗೆ ಸಾಮರ್ಥ್ಯ ಹೊಂದಿದ್ದು 28 ರೋಗಿಗಳನ್ನು ದಾಖಲು ಮಾಡಲಾಗಿದೆ.

ಮದ್ದೂರು ಆಸ್ಪತ್ರೆ 50 ಸಾಮರ್ಥ್ಯ ಹೊಂದಿದ್ದು 22 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗಮಂಗಲ ಆಸ್ಪತ್ರೆಯಲ್ಲಿ 22 ಮಂದಿ ಇದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಅಲ್ಲದ ಇತರ ರೋಗಿಗಳೂ ಬಂದು ಚಿಕಿತ್ಸೆ ಪಡೆಯುವ ಕಾರಣ ಕೋವಿಡ್ ವಾರ್ಡ್‌ನ ಹೊರೆ ಕಡಿಮೆ ಮಾಡಲು ನಿರ್ಧಾರ ಮಾಡಲಾಗಿದೆ. ಸದ್ಯ ಅಲ್ಲಿ 427 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಎ ರೋಗ ಲಕ್ಷಣ ಹೊಂದಿರುವ ರೋಗಿಗಳನ್ನು ಆಯಾ ತಾಲ್ಲೂಕು ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲು ನಿರ್ಧಾರ ಮಾಡಲಾಗಿದೆ. ತೀವ್ರ ಜ್ವರ, ಉಸಿರಾಟದ ಸಮಸ್ಯೆ ಉಳ್ಳವರನ್ನು ಮಾತ್ರ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಕಳುಹಿಸಲು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕ್ವಾರಂಟೈನ್‌ ಕೇಂದ್ರಗಳ ಬಳಕೆ: ಮುಂಬೈ ಸೇರಿ ಹೊರರಾಜ್ಯಗಳಿಂದ ಬಂದ ವಲಸಿಗರಿಗೆ ಸ್ಥಾಪಿಸಲಾಗಿದ್ದ ಕ್ವಾರಂಟೈನ್‌ ಕೇಂದ್ರಗಳನ್ನೂ ಕೋವಿಡ್‌ ವಾರ್ಡ್‌ಗಳನ್ನಾಗಿ ಬಳಸಿಕೊಳ್ಳಲು ಜಿಲ್ಲಾಡಳಿತ ತೀರ್ಮಾನಿಸಿದೆ. ಪ್ರತಿ ಕೇಂದ್ರದಲ್ಲಿ ವೈದ್ಯರ ತಂಡವನ್ನು ರಚನೆ ಮಾಡಲಾಗಿದೆ. ‘ಕೆ.ಆರ್‌.ಪೇಟೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲೇ ಆಸ್ಪತ್ರೆಗಳ ಸಾಮರ್ಥ್ಯವನ್ನು ವಿಸ್ತರಣೆ ಮಾಡಲಾಗಿದೆ. ಕ್ವಾರಂಟೈನ್‌ ಕೇಂದ್ರಗಳಲ್ಲೇ 4 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಬಹುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

ಜಿಲ್ಲಾಸ್ಪತ್ರೆ ಸೇರಿ ವಿವಿಧ ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್‌ ಪರೀಕ್ಷೆಯ ಸಂಖ್ಯೆಗಳನ್ನು ಹೆಚ್ಚಳ ಮಾಡಲಾಗಿದೆ. ನಿತ್ಯ 750 ಮಂದಿಗೆ ರ‍್ಯಾಪಿಡ್‌ ಆಂಟಿಜೆನ್‌ ಕಿಟ್‌ಗಳ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ.

56 ಮಂದಿಗೆ ಸೋಂಕು

ಸೋಮವಾರ ಒಂದೇ ದಿನ 56 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಒಟ್ಟು ರೋಗಿಗಳ ಸಂಖ್ಯೆ 1247ಕ್ಕೆ ಹೆಚ್ಚಳವಾಗಿದೆ.

ಈಗಾಗಲೇ ಕೋವಿಡ್‌ನಿಂದ 810 ಮಂದಿ ಗುಣಮುಖರಾಗಿದ್ದು 427 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿಲ್ಲ. ಜಿಲ್ಲೆಯಲ್ಲಿ ಕೋವಿಡ್‌ನಿಂದ 14 ಮಂದಿ ಮೃತಪಟ್ಟಿದ್ದಾರೆ.

ಸೋಮವಾರದ ಸೋಂಕಿತರ ವಿವರ

ಮಂಡ್ಯ– 30,ಮಳವಳ್ಳಿ–09,ಮದ್ದೂರು– 06,ಕೆ.ಆರ್‌.ಪೇಟೆ– 05,ಶ್ರೀರಂಗಪಟ್ಟಣ– 02,ಪಾಂಡವಪುರ– 02,ನಾಗಮಂಗಲ– 02,ಒಟ್ಟು– 56

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.