ಬಂಧನ (ಸಾಂದರ್ಭಿಕ ಚಿತ್ರ)
ಮಳವಳ್ಳಿ: ಮಹಿಳೆಯೊಬ್ಬರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ದಂಪತಿಗೆ ಮಂಡ್ಯದ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹5000 ದಂಡ ವಿಧಿಸಿದೆ.
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆರಿಯನಾಯಕನಪಾಳ್ಯದ ಆನಂದ ಮತ್ತು ಆತನ ಪತ್ನಿ ಆನಂದಿ ಅಪರಾಧಿಗಳು.
2012ರ ಮೇ 26ರಂದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೆರಿಯನಾಯಕನಪಾಳ್ಯದ ಆನಂದ ಮತ್ತು ಆತನ ಪತ್ನಿ ಆನಂದಿ ತಮಗೆ ಪರಿಚಯದ ರಜಾತಿ (ಆರೋಗ್ಯ ಮೇರಿ) ಅವರನ್ನು ಕನಕಪುರ ಕಬ್ಬಾಳಮ್ಮನ ದೇವಸ್ಥಾನಕ್ಕೆ ಹೋಗಿ ಬರೋಣ ಎಂದು ಹೇಳಿ ಕರೆದುಕೊಂಡು ಬಂದು ರಜಾತಿ ಅವರಿಗೆ ಮದ್ಯಪಾನ ಮಾಡಿಸಿ ಮಳವಳ್ಳಿ ತಾಲ್ಲೂಕಿನ ಧನಗೂರು ಕುರಿ ಫಾರಂ ಕಡೆಗೆ ಹೋಗುವ ರಸ್ತೆಯ ನೀಲಗಿರಿ ತೋಪಿನಲ್ಲಿ ಆಕೆಯ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಸಾಯಿಸಿ ಆಕೆಗೆ ಮೈಮೇಲಿದ್ದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದರು.
ಹಲಗೂರು ಪೊಲೀಸ್ ಠಾಣೆಯಲ್ಲಿ ಕೊಲೆಯಾದ ಮಹಿಳೆಯ ಪತಿ ಈ ಸಂಬಂಧ ದೂರು ದಾಖಲಿಸಿದ್ದರು. ಕೆ.ಎಂ.ದೊಡ್ಡಿಯ ಅಂದಿನ ಸಿಪಿಐ ಎಸ್.ಇ. ಗಂಗಾಧರಸ್ವಾಮಿ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ಆಲಿಸಿದ ನ್ಯಾಯಾಧೀಶರಾದ ಜೆ.ಎಸ್.ಸುಬ್ರಮಣ್ಯ ಅವರು ಅಪರಾಧಿ ದಂಪತಿಗೆ ಶಿಕ್ಷೆ ಪ್ರಕಟಿಸಿದರು.
ಸರ್ಕಾರಿ ಅಭಿಯೋಜಕಿ ಜಿ.ವೆಂಕಟಲಕ್ಷ್ಮಮ್ಮ ಅವರು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.