ಪಾಂಡವಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ (ಟಿಎಪಿಸಿಎಂಎಸ್) ಕಳೆದ 5 ವರ್ಷಗಳಿಂದ ನಡೆದಿರುವ ಎಲ್ಲಾ ಅವ್ಯವಹಾರಗಳನ್ನೂ ಸಿಐಡಿ ತನಿಖೆಗೆ ಒಪ್ಪಿಸಲು ಮಹಾಸಭೆಯು ಸರ್ವಾನುಮತದಿಂದ ತೀರ್ಮಾನಿಸಿತು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಡಿ.ಶ್ರೀನಿವಾಸ್ (ವಾಸು) ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರ ಸದಸ್ಯರು ಒಕ್ಕೊರಲಿನಿಂದ ದನಿ ಎತ್ತಿದರಲ್ಲದೆ, ತನಿಖೆಗೆ ಒಳಪಡಿಸಲು ನಿರ್ಣಯಕೈಗೊಂಡರು.
ಟಿಎಪಿಸಿಎಂಎಸ್‌ನ ಎಲ್ಲ ಮಾರಾಟ ಕೇಂದ್ರಗಳಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ, ಪೆಂಟ್ರೋಲ್ ಬಂಕ್, ಗೊಬ್ಬರ ಶಾಖೆ, ವಾಣಿಜ್ಯ ಮಳಿಗೆ ಸೇರಿದಂತೆ ಇನ್ನಿತರ ಶಾಖೆಗಳಲ್ಲಿ ಅವ್ಯಹಾರ ನಡೆದಿರುವುದು ಕಂಡುಬರುತ್ತಿದೆ. ಪರಿಪೂರ್ಣ ಮಾಹಿತಿ ನೀಡಲು ಸಂಘದ ಸಿಇಒ ನವೀನ್ ಹಾಗೂ ಅಧ್ಯಕ್ಷ ಡಿ.ಶ್ರೀನಿವಾಸ್ ಅವರು ವಿಫಲರಾಗಿದ್ದಾರೆ. ಸಭೆಯಲ್ಲಿ ಷೇರುದಾರರ ಸದಸ್ಯರು ಪ್ರಸ್ತಾಪಿಸಿದ ಹಲವು ವಿಷಯಗಳಿಗೆ ಸಮರ್ಪಕ ಉತ್ತರ ನೀಡದೆ, ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಹೀಗಾಗಿ ನಿಯಮ 64 ಮತ್ತು ಸಿಐಡಿ ತನಿಗೆ ಒಳಪಡಿಸಬೇಕು ಎಂದು ಷೇರುದಾರ ಸದಸ್ಯರಾದ ಎಚ್.ಎನ್.ಮಂಜುನಾಥ್, ಮಹಾದೇವೇಗೌಡ, ಬಾಲಗಂಗಾಧರ್, ಪರಮೇಶ್, ಜನಾರ್ಧನ್, ರವಿಕುಮಾರ್, ಆರ್.ಕೇಶವ ಅವರು ನಿರ್ಣಯ ಮಂಡಿಸಿದರು. ಇದನ್ನು ಮಹಾಸಭೆಯು ಸರ್ವಾನುಮತದಿಂದ ಅಂಗೀಕರಿಸಿತು.
ಪೆಟ್ರೋಲ್ ಬಂಕ್‌ನಿಂದ ವಾರ್ಷಿಕ ಆದಾಯ ಕೇವಲ ₹ 93ಸಾವಿರ ಎಂದು ಹೇಳುತ್ತಿದ್ದೀರಿ, ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆ ಮತ್ತು ಕಲ್ಯಾಣ ಮಂಟಪದ ಅಡಿಗೆ ಮನೆ ನಿರ್ಮಾಣ ಕಾಮಗಾರಿಯಲ್ಲಿ ಅವ್ಯಹಾರ ನಡೆದಿದೆ. ತಿಂಗಳುಗಟ್ಟಲೆ ಸಂಘದ ಕ್ಯಾಷ್‌ಬುಕ್ ನಿರ್ವಹಣೆ ಮಾಡಿಲ್ಲದಿರುವುದನ್ನು ಸ್ವತಃ ಸಂಘದ ಸಿಇಒ ಒಪ್ಪಿಕೊಂಡಿದ್ದಾರೆ. ಹೀಗಾಗಿ ಸಿಇಒ ಅವರನ್ನು ಬದಲಾವಣೆ ಮಾಡಬೇಕು. ಅಲ್ಲದೇ ಇಂದಿನ ಆಡಳಿತ ಮಂಡಳಿಯು ನೈತಿಕತೆ ಹೊತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಷೇರುದಾರ ಸದಸ್ಯರಾದ ಸಿದ್ದಲಿಂಗೇಗೌಡ, ಪಿ.ಎಸ್.ಜಗದೀಶ್, ಹರವು ಪ್ರಕಾಶ್, ಚಿಕ್ಕಾಡೆ ಮಹೇಶ್, ಕುಬೇರ ಅವರು ಆಗ್ರಹಿಸಿದರು. ಸಭೆಯು ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿತು.
ಸಂಘದ ಉಪಾಧ್ಯಕ್ಷೆ ತಿಬ್ಬಮ್ಮ, ನಿರ್ದೇಶಕರಾದ ರಾಮಕೃಷ್ಣೇಗೌಡ, ಶ್ರೀಕಾಂತ್ ಸೇರಿ ಹಲವು ನಿರ್ದೇಶಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.