ADVERTISEMENT

ಜಿಲ್ಲೆಯಲ್ಲಿ 710 ಮಂದಿಗೆ ಕ್ಷಯ

ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಇಳಿಕೆ: ಪೂರ್ಣ ನಿಯಂತ್ರಣಕ್ಕೆ ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:07 IST
Last Updated 28 ಅಕ್ಟೋಬರ್ 2025, 4:07 IST
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಟ್ಟದ ಟಿ.ಬಿ.ಫೋರಂ ಸಭೆಯು ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ನಡೆಯಿತು. ಡಿಎಚ್‌ಒ ಡಾ.ಕೆ.ಮೋಹನ್‌ ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು 
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಟ್ಟದ ಟಿ.ಬಿ.ಫೋರಂ ಸಭೆಯು ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ನಡೆಯಿತು. ಡಿಎಚ್‌ಒ ಡಾ.ಕೆ.ಮೋಹನ್‌ ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು    

ಮಂಡ್ಯ: ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಟಿ.ಬಿ.ಫೋರಂ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷಯ ರೋಗ ಲಕ್ಷಣಗಳು ಕಂಡು ಬರುವ ಮಧುಮೇಹಿಗಳು, ಧೂಮಪಾನಿಗಳು, ಕ್ಯಾನ್ಸರ್ ಪೀಡಿತರು, ಸಕ್ಕರೆ ಕಾಯಿಲೆ ರೋಗಿಗಳು, ವೃದ್ಧರು, ಮಕ್ಕಳು ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಉಚಿತವಾಗಿ ಕ್ಷಯ ರೋಗ ತಪಾಸಣೆ ಮಾಡಲಾಗುತ್ತಿದೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ 710 ರೋಗಿಗಳು ಕ್ಷಯ ರೋಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕ್ಷಯ ರೋಗಗಳ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ADVERTISEMENT

2015ರ ಕ್ಷಯ ರೋಗದ ಪ್ರಮಾಣವನ್ನು 2022ಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಶೇ 20ರಷ್ಟು ಕ್ಷಯ ರೋಗಿಗಳು ಕಡಿಮೆಯಾಗಿವೆ. 2022ರಲ್ಲಿ ಕೇಂದ್ರ ಕ್ಷಯರೋಗ ವಿಭಾಗ ಜಿಲ್ಲೆಗೆ ಕಂಚಿನ ಪದಕ ನೀಡಿ ಗೌರವಿಸಿದೆ. ಜಿಲ್ಲೆಯಲ್ಲಿ 4 CBNAAT (ಕಾರ್ಟ್ರಿಡ್ಜ್-ಆಧಾರಿತ ನ್ಯೂಕ್ಲಿಯಿಕ್ ಆಮ್ಲ ವರ್ಧನೆ ಪರೀಕ್ಷೆ) ಮಷೀನ್ ಗಳು ಇವೆ. ಕ್ಷಯ ರೋಗ ಲಕ್ಷಣ ಇರುವ ವ್ಯಕ್ತಿಯ ಎಂಜಲಿನಿಂದ ಕೇವಲ 2 ಗಂಟೆಗಳಲ್ಲಿ ಕ್ಷಯ ರೋಗವನ್ನು ಪತ್ತೆ ಹಚ್ಚಬಲ್ಲದು ಎಂದು ತಿಳಿಸಿದರು.

ಟಿ.ಬಿ ಪರೀಕ್ಷೆ ಮಾಡುವ ಸಂದರ್ಭದಲ್ಲಿ ರೋಗಿಗಳ ಸಂಪೂರ್ಣ ಆರೋಗ್ಯವನ್ನು ತಪಾಸಣೆ ಮಾಡಿ, ಶಾಲಾ ಮಕ್ಕಳಿಂದ ಕ್ಷಯ ರೋಗ ಜಾಗೃತಿ ಮೂಡಿಸಿ, ಕೊಳಚೆ ಪ್ರದೇಶಗಳಲ್ಲಿ ಕ್ಷಯ ರೋಗದ ಕುರಿತಾಗಿ ಅರಿವು ಮೂಡಿಸಿ. ಟಿ.ಬಿ ಮುಕ್ತ ತಾಲ್ಲೂಕು ಮಾಡಲು ಕ್ರಮ ವಹಿಸಿ ಎಂದು ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ಕೆ ಮೋಹನ್, ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತ, ಆರ್ ಸಿ ಎಚ್ ಅಧಿಕಾರಿ ಡಾ ಅಶ್ವತ್ಥ್ , ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಸೋಮಶೇಖರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು

‘67 ಗ್ರಾಮ ಪಂಚಾಯಿತಿ ಕ್ಷಯಮುಕ್ತ

’ ಜಿಲ್ಲೆಯಲ್ಲಿ ಪ್ರತಿ ವರ್ಷ ಟಿ.ಬಿ ಮುಕ್ತ ಗ್ರಾಮ ಪಂಚಾಯಿತಿಗಳನ್ನು ಘೋಷಣೆ ಮಾಡಬೇಕು. ಟಿ.ಬಿ ಪ್ರಕರಣಗಳು ಕಡಿಮೆ ಹಾಗೂ ಅರ್ಹ ಮಾನದಂಡ ಇರುವ ಗ್ರಾಮ ಪಂಚಾಯಿತಿಗಳನ್ನು ಟಿ.ಬಿ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸಲಾಗುವುದು 2023ರಲ್ಲಿ 16 ಗ್ರಾಮ ಪಂಚಾಯಿತಿ 2024ರಲ್ಲಿ 41 ಗ್ರಾಮ ಪಂಚಾಯಿತಿ ಹಾಗೂ ಸದರಿ ವರ್ಷ ಅಂದಾಜು 67 ಗ್ರಾಮ ಪಂಚಾಯಿತಿಗಳನ್ನು ಕ್ಷಯ ರೋಗ ಮುಕ್ತ ಗ್ರಾಮ ಪಂಚಾಯಿತಿಗಳು ಎಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕುಮಾರ ಮಾಹಿತಿ ನೀಡಿದರು. ಕ್ಷಯ ರೋಗ ದೃಢಪಟ್ಟ ರೋಗಿಗಳಿಗೆ 6 ತಿಂಗಳು ಆಶಾ ಕಾರ್ಯಕರ್ತೆಯರಿಂದ ಉಚಿತವಾಗಿ ಔಷಧಗಳನ್ನು ಒದಗಿಸಲಾಗುವುದು. ಕನಿಷ್ಠ 10 ದಿನಗಳ ಔಷಧ ಸೇವನೆಯಿಂದ ಕ್ಷಯ ರೋಗ ಇತರರಿಗೆ ಹರಡದಂತೆ ತಡೆಯಬಹುದು. ಕ್ಷಯ ರೋಗಿಗಳ ಪೌಷ್ಟಿಕತೆಗಾಗಿ ಕೇಂದ್ರ ಸರ್ಕಾರದ ‘ನಿಕ್ಷಯ್ ಪೋಷಣಾ ಯೋಜನೆ’ಯಡಿ ಪ್ರತಿ ತಿಂಗಳು ₹1000 ನೀಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.