ADVERTISEMENT

ಸಾರ್ವಜನಿಕ ಕ್ಷೇತ್ರ: ಅಪಹಾಸ್ಯ ಮಾಡುವ ಸ್ಥಿತಿ

ಡಾ.ರಾಮಮನೋಹರ ಲೋಹಿಯಾ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಎಚ್‌.ಎ.ವೆಂಕಟೇಶ್‌ ಬೇಸರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 2:48 IST
Last Updated 5 ಏಪ್ರಿಲ್ 2021, 2:48 IST
ಮಂಡ್ಯ ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಸಮಾಜವಾದಿ ನಾಯಕ ಡಾ.ರಾಮಮನೋಹರ ಲೋಹಿಯಾ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬಣ್ಣ ಮತ್ತು ಅರಗು ಕಾರ್ಖಾನೆಯ ಮಾಜಿ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌ ಮಾತನಾಡಿದರು
ಮಂಡ್ಯ ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಸಮಾಜವಾದಿ ನಾಯಕ ಡಾ.ರಾಮಮನೋಹರ ಲೋಹಿಯಾ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬಣ್ಣ ಮತ್ತು ಅರಗು ಕಾರ್ಖಾನೆಯ ಮಾಜಿ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌ ಮಾತನಾಡಿದರು   

ಮಂಡ್ಯ: ದೇಶದಲ್ಲಿ ರಾಜಕೀಯ ಪಕ್ಷಗಳು, ನಾಯಕರನ್ನು ಅಪನಂಬಿಕೆ ಯಿಂದ ನೋಡುವ ವಾತಾವರಣ ಸೃಷ್ಟಿಯಾಗಿದೆ.ಜನರು ಸಾರ್ವಜನಿಕ ಕ್ಷೇತ್ರದ ಬಗ್ಗೆ ಅಪಹಾಸ್ಯ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಣ್ಣ ಮತ್ತು ಅರಗು ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸಮಾಜವಾದಿ ವೇದಿಕೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಸಮಾಜವಾದಿ ನಾಯಕ ಡಾ.ರಾಮಮನೋಹರ ಲೋಹಿಯಾ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜವಾದಿ ಚಿಂತಕರಾಗಿ ಸಾರ್ವ ಜನಿಕ, ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ ಲೋಹಿಯಾ ಸೇರಿದಂತೆ ಇತರರು ಒಂದೆಡೆಯಾದರೆ ಸೇವೆ ಮಾಡುವ ಧ್ಯೇಯದೊಂದಿಗೆ ರಾಜಕೀಯಕ್ಕೆ ಬಂದವರು ರಾಜಕೀಯ ಕ್ಷೇತ್ರವನ್ನು ಅಪಹಾಸ್ಯಕ್ಕೀಡು ಮಾಡು ತ್ತಿದ್ದಾರೆ. ರಾಜಕೀಯ ಕ್ಷೇತ್ರ ಗೌರವ ಯುತವಾದ ಕ್ಷೇತ್ರವಾಗಿದ್ದು, ಸಮಾಜ ಸೇವೆ, ಸಮಾಜ ಸುಧಾರಣೆ ಮೂಲ ಉದ್ದೇಶವಾಗಿದೆ. ಆದರೆ, ಯಾರೂ ಇದನ್ನು ಪ್ರಾಮಾಣಿಕವಾಗಿ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಲೋಹಿಯಾ ಅವರು ಉನ್ನತ ಶಿಕ್ಷಣ ಪಡೆದು ತಮ್ಮನ್ನು ಸಮಾಜ, ದೇಶಕ್ಕೆ ಅರ್ಪಿಸಿಕೊಂಡಿದ್ದರು. ತಮಗಾಗಿ ಏನೂ ಇಟ್ಟುಕೊಳ್ಳದೆ ಸಮಾಜವಾದದ ಚಿಂತನೆಯನ್ನು ದೇಶದಾದ್ಯಂತ ಪ್ರಚಾರ ಮಾಡಿದರು. ಆದರೆ, ಇಂದು ಅತ್ಯಂತ ಉನ್ನತ ಶಿಕ್ಷಣ ಪಡೆದವರು ಜ್ಞಾನದ ಸಾರವನ್ನು ತನಗಾಗಿ, ತನ್ನ ಕುಟುಂಬದ ಬೆಳವಣಿಗೆಗಾಗಿ ಸೀಮಿತಗೊಳಿಸಿದ್ದಾರೆ ಎಂದರು.

ಲೋಹಿಯಾ ಅವರ ಚಿಂತನೆಗಳು ಎಂದಿಗೂ ನಮ್ಮ ಮಧ್ಯೆ ಇರುತ್ತವೆ. ಏನೂ ಇಲ್ಲದವರನ್ನು, ಕೂಲಿ ಮಾಡುವವರ ಬಗ್ಗೆ ಲೋಹಿಯಾ ಅವರಿಗೆ ವಿಶೇಷ ಕಾಳಜಿ ಇತ್ತು. ಕೂಲಿ ಮಾಡುವವರು ಬಹಳ ಶೋಷಣೆಗೆ ಒಳಗಾಗುತ್ತಾರೆ ಎಂದು ನಂಬಿದ್ದರು. ಅವರು ಉಳ್ಳವರ ಪರವಾಗಿರಲಿಲ್ಲ. ಬಡವರು, ಶೋಷಿತರ ಪರವಾಗಿದ್ದರು. ಭೂಮಿಗೆ ತೆರಿಗೆ ಹಾಕಬಾರದು ಎಂದು ಪ್ರತಿಪಾದಿಸಿದ್ದರು. ಆದರೆ, ಇಂದಿನ ಸರ್ಕಾರ ಊಟ ಮಾಡುವ ಅನ್ನಕ್ಕೆ ತೆರಿಗೆ ಹಾಕುತ್ತಿದೆ. ಇಡೀ ದೇಶ ಕಷ್ಟದ ಪರಿಸ್ಥಿತಿಯಲ್ಲಿದೆ ಎಂದು ಹೇಳಿದರು.

ಕರ್ನಾಟಕದ ಕಾಗೋಡು ಸತ್ಯಾಗ್ರಹದಲ್ಲಿ ಲೋಹಿಯಾ ಅವರು ಭಾಗಿಯಾಗಿ ರೈತರ ಪರವಾಗಿ ಹೋರಾಟ ಮಾಡಿದ್ದರು. ಅದು ಇಂದಿಗೂ ಸ್ಫೂರ್ತಿಯಾಗಿದೆ. ಲೋಹಿಯಾ ರೈತರನ್ನು ಬೆಂಬಲಿಸಿದ್ದು, ಐತಿಹಾಸಿಕ ಘಟನೆಯಾಗಿದೆ ಎಂದು ಸ್ಮರಿಸಿದರು.

ಡಿ.ದೇವರಾಜ ಅರಸು ಹಿಂದುಳಿದ ವೇದಿಕೆ ಅಧ್ಯಕ್ಷ ಎಲ್‌.ಸಂದೇಶ್‌ ಮಾತನಾಡಿ, ಕರ್ನಾಟಕ, ದೇಶದ ರಾಜಕಾರಣ ಅವಲೋಕಿಸಿದಾಗ ಲೋಹಿಯಾ ಅವರಂಥ ಜಾತ್ಯತೀತ, ಸಮಾಜವಾದಿ ನಾಯಕರನ್ನು ಅನು ಕರಣೆ ಮಾಡಬೇಕಿದೆ. ಸಮಾಜಸೇವೆ ಉದ್ದೇಶದಿಂದ ಆರಂಭವಾದ ರಾಜ ಕೀಯ ಕ್ಷೇತ್ರ ಪ್ರಸ್ತುತ ವ್ಯಾಪಾರ ದಿಕ್ಕಿಗೆ ಸಾಗುತ್ತಿದೆ. ಇಂಥ ಸಂದರ್ಭದಲ್ಲಿ ಅವರನ್ನು, ಅವರ ಚಿಂತನೆಯನ್ನು ರಾಜಕೀಯ ನಾಯಕರು ಗ್ರಹಿಸಿ ಅನುಸರಿ ಸಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಂಶುಪಾಲ ಬಿ.ಎಸ್‌.ಚಂದ್ರಶೇಖರನ್‌ ಅಧ್ಯಕ್ಷತೆ ವಹಿಸಿದ್ದರು. ಸಮಾಜವಾದಿ ವೇದಿಕೆ ಸಂಚಾಲಕ ಹುರುಗಲವಾಡಿ ರಾಮಯ್ಯ, ವಸಂತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.