ADVERTISEMENT

ನಕಲಿ ದಾಖಲೆ ಸೃಷ್ಟಿಸಿ ದೇವಾಲಯದ ಆಸ್ತಿ ಪರಭಾರೆ: ಆರೋಪ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:10 IST
Last Updated 28 ಅಕ್ಟೋಬರ್ 2025, 4:10 IST
ಹಲಗೂರು ಸಮೀಪದ ಬಸವನಹಳ್ಳಿ ಗ್ರಾಮದ ದೇವಾಲಯದ ಸ್ಥಳವನ್ನು ತಹಶೀಲ್ದಾರ್ ಎಸ್.ವಿ. ಲೋಕೇಶ್ ಪರಿಶೀಲನೆ ನಡೆಸಿದರು
ಹಲಗೂರು ಸಮೀಪದ ಬಸವನಹಳ್ಳಿ ಗ್ರಾಮದ ದೇವಾಲಯದ ಸ್ಥಳವನ್ನು ತಹಶೀಲ್ದಾರ್ ಎಸ್.ವಿ. ಲೋಕೇಶ್ ಪರಿಶೀಲನೆ ನಡೆಸಿದರು   

ಹಲಗೂರು: ಸಮೀಪದ ಬಸವನಹಳ್ಳಿ ಹೆಬ್ಬೆಟ್ಟದ ಬಸವೇಶ್ವರ ದೇವಸ್ಥಾನದ ಆಸ್ತಿಯನ್ನು ಅರ್ಚಕರು ನಕಲಿ ದಾಖಲೆ ನೀಡಿ ತಮ್ಮ ಕುಟುಂಬದವರ ಹೆಸರಿಗೆ ಖಾತೆ ಮಾಡಿಸಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಗ್ರಾಮಸ್ಥರು ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದಾರೆ.

ಬಸವನಹಳ್ಳಿ ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಬಸವೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಬ್ರಿಟಿಷರ ಕಾಲದಿಂದಲೂ ಇನಾಂ ಜಮೀನುಗಳಿದ್ದು, 1969ರಿಂದಲೂ ಸ.ನಂ 15ರಲ್ಲಿ 9 ಎಕರೆ 19 ಗುಂಟೆ ಬಸವೇಶ್ವರ ದೇವರ ಹೆಸರಿನಲ್ಲಿ, ಸ.ನಂ 14ರಲ್ಲಿ 5 ಎಕರೆ 39 ಗುಂಟೆ ವಡೇರಿ ಗೋರಿ ಎಂದು ದಾಖಲೆ ಇದೆ.

ADVERTISEMENT

ಈ ಇನಾಂ ಜಮೀನಿನಲ್ಲಿ ಸ.ನಂ 14 ಮತ್ತು 15ರ ಜಮೀನನ್ನು 2018 ರಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಸುಳ್ಳು ದಾಖಲೆ ಒದಗಿಸಿ ದೇವಸ್ಥಾನದ ಪೂಜಾರಿ ಹೆಸರಿಗೆ ಖಾತೆ ಮಾಡಿಸಿಕೊಳ್ಳಲಾಗಿದೆ. ಈ ಪೈಕಿ ಸ.ನಂ 15ರಲ್ಲಿ 9.19 ಗುಂಟೆ ಜಮೀನನ್ನು 2025ರಲ್ಲಿ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಲಾಗಿದೆ. ಇದಾದ ಬಳಿಕ ಆ ಉದ್ಯಮಿ ಜಮೀನನ್ನು ವಿಂಗಡಿಸಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

ಸ.ನಂ 14ರ ಜಮೀನು ವಡೇರಿ ಗೋರಿ ಅದೇ ಗ್ರಾಮದ ಮಠದ ಶಾಂತ ಲಿಂಗಸ್ವಾಮಿ ಗುರುಗಳಿಗೆ ಸೇರಿದ್ದು, ಆ ಗುರುಗಳ ಮರಣದ ನಂತರ ಅವರ ಗೋರಿ ಇರುವುದಕ್ಕೆ ವಡೇರಿಗೋರಿ ಎಂದು ಕರೆಯಲಾಗುತ್ತದೆ. ಈ ಅಸ್ತಿಯನ್ನು ಪೂಜಾರಿ ಕುಟುಂಬದವರು ಅಕ್ರಮ ಖಾತೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಮೀನುಗಳ ಮೂಲ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾ‌ರ್ ಮತ್ತು ಜಿಲ್ಲಾಧಿಕಾರಿಗೆ ಬಸವನಹಳ್ಳಿ ಗ್ರಾಮಸ್ಥರು ದೂರು ಸಲ್ಲಿಸಿದ್ದರು.

ಇತ್ತೀಚೆಗೆ ಖರೀದಿದಾರ ದೇವಸ್ಥಾನದ ಪಕ್ಕದಲ್ಲೇ ರಸ್ತೆ ಮತ್ತು ಜಮೀನಿನಲ್ಲಿ ಗಿಡ ಗಂಟಿಗಳನ್ನು ತೆರವು ಮಾಡಿದ್ದು, ನಂತರ ಖರೀದಿಸಿದ ಭೂಮಿಯಲ್ಲಿ ಅಳತೆ ಕಲ್ಲುಗಳನ್ನು ಹಾಕಿಸಿದ್ದರು. ಇದರಿಂದ  ಆತಂಕಗೊಂಡ ಗ್ರಾಮಸ್ಥರು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

‘ಬಸವೇಶ್ವರ ದೇವಸ್ಥಾನದ ಜಮೀನು ಅಕ್ರಮವಾಗಿ ಪರಭಾರೆ ಆಗಿರುವ ಬಗ್ಗೆ ಬಸವನಹಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಸೂಚನೆಯಂತೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಮೂಲ ದಾಖಲೆಯಲ್ಲಿ ಬಸವೇಶ್ವರ ದೇವರು ಎಂಬುದಾಗಿ ನಮೂದಾಗಿದೆ. ನಮ್ಮ ಕಚೇರಿಯಲ್ಲಿ ಲಭ್ಯವಿರುವ ದಾಖಲೆ ಮತ್ತು ಖಾತೆ ಬದಲಾಗಿರುವ ಪೂರಕ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಅವರ ಮುಂದಿನ ಆದೇಶದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಹಶೀಲ್ದಾರ್‌ ವಿ.ಎಸ್.ಲೋಕೇಶ್ ತಿಳಿಸಿದ್ದಾರೆ.

‘ಅರ್ಚಕರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪ್ರಕರಣದಲ್ಲಿ ಶಾಮೀಲಾಗಿ ದೇವಾಲಯದ ಆಸ್ತಿಯನ್ನು ಖಾಸಗಿಯವರಿಗೆ ವರ್ಗಾಯಿಸಿದ್ದಾರೆ. ಜಿಲ್ಲಾಧಿಕಾರಿ ಪ್ರಕರಣದ ತನಿಖೆ ನಡೆಸಿ, ದೇವಾಲಯದ ಹೆಸರಿಗೆ ಮರಳಿ ಆರ್.ಟಿ.ಸಿ ಸೇರ್ಪಡೆ ಮಾಡಬೇಕು’ ಎಂದು ಗ್ರಾಮ ಪಂಚಾಯತಿ ಸದಸ್ಯ ಶಶಿಕುಮಾರ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.