ADVERTISEMENT

ಮಹದೇಶ್ವರ ದೇವಸ್ಥಾನ ಲೋಕಾರ್ಪಣೆಗೆ ಸಿದ್ಧ

ಕನ್ನಂಬಾಡಿ ಕಟ್ಟೆಯ ಹಿನ್ನೀರಿನಲ್ಲಿ ತ್ರಿವೇಣಿ ಸಂಗಮದ ನೋಟ

ಬಲ್ಲೇನಹಳ್ಳಿ ಮಂಜುನಾಥ
Published 30 ಜನವರಿ 2022, 2:49 IST
Last Updated 30 ಜನವರಿ 2022, 2:49 IST
ಸಣ್ಣಸ್ವಾಮೀಗೌಡ
ಸಣ್ಣಸ್ವಾಮೀಗೌಡ   

ಕೆ.ಆರ್.ಪೇಟೆ: ತಾಲ್ಲೂಕಿನ ಅಂಬಿಗರ ಹಳ್ಳಿ ಪುರ ಸಂಗಾಪುರದ ಸಮೀಪ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ಸೇರುವ ತ್ರಿವೇಣಿ ಸಂಗಮದ ಕನ್ನಂಬಾಡಿಕಟ್ಟೆ ಹಿನ್ನೀರಿಗೆ ಹೊಂದಿಕೊಂಡಂತೆ ನಿರ್ಮಿಸುತ್ತಿರುವ ಮಹದೇಶ್ವರರ ದೇವಾಲಯ ಲೋಕಾರ್ಪಣೆಗೆ ಸಿದ್ದವಾಗಿದೆ.

ತ್ರಿವೇಣಿಸಂಗಮ ಕ್ಷೇತ್ರವು ಕುಂಭ ಮೇಳಕ್ಕೆ ಹೆಸರಾಗಿದ್ದು, ಬಾಲಕ ಮಲೆಮಹದೇಶ್ವರರು ಪವಾಡ ಮಾಡಿದ ಸ್ಥಳವಾಗಿದೆ. ಇಲ್ಲಿ ಕನ್ನಂಬಾಡಿ ಕಟ್ಟೆಯ ಹಿನ್ನೀರು ಕಣ್ಣು ಹಾಯಿಸಿದಷ್ಟು ದೂರ ವ್ಯಾಪಿಸಿದೆ. ಈ ಜಲರಾಶಿ ಮಧ್ಯೆ ಮಹದೇಶ್ವರರ ದೇವಸ್ಥಾನವಿತ್ತು. ಅದು ಶಿಥಿಲಗೊಂಡಿದ್ದರಿಂದ ಹೊಸದಾಗಿ ದೇವಸ್ಥಾನ ನಿರ್ಮಿಸಬೇಕೆಂಬುದು ಸ್ಥಳೀಯರ ಬೇಡಿಕೆಯಾಗಿತ್ತು. ಎಲ್ಲರ ನೆರವಿನೊಂದಿಗೆ ದೇವ ಸ್ಥಾನದ ನಿರ್ಮಾಣ ಕಾರ್ಯ ಪೂರ್ಣ ಗೊಂಡಿದ್ದು, ಮಹಾಶಿವರಾತ್ರಿ ವೇಳೆ ಲೋಕಾರ್ಪಣೆಯಾಗಲಿದೆ.

ಪವಾಡ ಮಾಡಿದ ತಾಣ: ಪುರಾಣಗಳ ಪ್ರಕಾರ ಬಾಲಕರಾದ ಮಹದೇಶ್ವರರು ಉತ್ತರ ದೇಶದಿಂದ ಬಂದಾಗ ಮೊದಲ ಬಾರಿಗೆ ಸಂಗಮಕ್ಷೇತ್ರದಲ್ಲಿ ಪವಾಡ ಮಾಡಿದರೆಂಬ ಪ್ರತೀತಿ ಇದೆ. ಇನ್ನೊಂದು ದಡಕ್ಕೆ ಹೋಗಲು ನದಿ ದಾಟಿಸಬೇಕೆಂದು ಬಾಲಕ ಮಹ ದೇಶ್ವರರು ಅಂಬಿಗರಲ್ಲಿ ವಿನಂತಿಸಿದಾಗ ಕಾಷಾಯಧಾರಿ ಮಹದೇಶ್ವರರಲ್ಲಿ ಹಣ ಇಲ್ಲದೆ ಇರುವುದನ್ನು ಗಮನಿಸಿ ಅಂಬಿಗರು ನಿರಾಕರಿಸುತ್ತಾರೆ. ಆಗ ಮಹದೇಶ್ವರರು ಹೊದ್ದಿದ್ದ ಕಾಷಾಯ ವಸ್ತ್ರವನ್ನೇ ನೀರಿನ ಮೇಲೆ ಹಾಸಿ ತೆಪ್ಪವನ್ನಾಗಿ ಮಾಡಿಕೊಂಡು ಕಪ್ಪಡಿಕ್ಷೇತ್ರದತ್ತ ಪ್ರಯಾಣ ಮಾಡುತ್ತಾರೆ. ಅವರು ನೀಡಿದ ಶಾಪದ ಪರಿಣಾ ಮವಾಗಿ ಗ್ರಾಮವು ಕನ್ನಂಬಾಡಿ ಕಟ್ಟೆ ನಿರ್ಮಾಣವಾದಾಗ ನೀರಿನಲ್ಲಿ ಮುಳುಗಿ ಹೋಯಿತೆಂದು ಗ್ರಾಮದ ಹಿರಿಯರು ಹೇಳುತ್ತಾರೆ.

ADVERTISEMENT

ಸಂಗಮೇಶ್ವರನ ತಾಣ: ತ್ರಿವೇಣಿ ಸಂಗಮವು ಸಂಗಮೇಶ್ವರರ ದೇವಸ್ಥಾನ ದಿಂದ ಹೆಸರಾಗಿತ್ತು. ಕನ್ನಂಬಾಡಿ ಕಟ್ಟೆ ನಿರ್ಮಾಣವಾದ ನಂತರ ಸಂಗಾಪುರ ಮತ್ತು ಅಲ್ಲಿದ್ದ ಸಂಗಮೇಶ್ವರ ದೇವಸ್ಥಾನ ಮುಳುಗಡೆಯಾಯಿತು. ಅಲ್ಲಿನ ಗ್ರಾಮಸ್ಥರು ಎತ್ತರವಾದ ಸ್ಥಳದಲ್ಲಿ ಊರು ನಿರ್ಮಿಸಿದರು. ಸ್ವಾತಂತ್ರ್ಯಾ ನಂತರ ದೇವಸ್ಥಾನದೊಳಗಿದ್ದ ಶಿವಲಿಂಗವನ್ನು ಅಲ್ಲಿಂದ ತಂದು ಈಗಿರುವ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಇಲ್ಲಿ ಜಾತ್ರೆ, ರಥೋತ್ಸವ ನಡೆಯುತ್ತದೆ.

ದೇವಸ್ಥಾನಗಳ ಅಭಿವೃದ್ಧಿ ಮತ್ತು ಈ ಸ್ಥಳವನ್ನು ಪ್ರವಾಸಿತಾಣವನ್ನಾಗಿ ಮಾಡುವಲ್ಲಿ ಜನಪ್ರತಿನಿಧಿಗಳು, ಭಕ್ತರು, ಮತ್ತು ದಾನಿಗಳು ಸಹಕಾರ ನೀಡಬೇಕು ಎನ್ನುವ ಮನವಿ ತ್ರಿವೇಣಿ ಸಂಗಮ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸಂಚಾಲಕ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಂ.ಚಿ.ಸಣ್ಣಸ್ವಾಮಿಗೌಡ ಅವರದ್ದು. ಮಹದೇಶ್ವರ ದೇವಾಲಯಕ್ಕೆ ಭಕ್ತರು, ಜನಪ್ರತಿನಿಧಿಗಳು ಮತ್ತು ದಾನಿಗಳಿಂದ ನೆರವು ಸಿಕ್ಕಿದ್ದು ಮುಕ್ತಾಯ ಹಂತಕ್ಕೆ ಬಂದಿದೆ. ಇಲ್ಲಿನ ಹತ್ತು ಎಕರೆಯಲ್ಲಿ ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಸಾಹಸ ಅಕಾಡೆಮಿ ವತಿಯಿಂದ ಸಾಹಸ ಕ್ರೀಡೆಗಳ ತರಬೇತಿ ಶಾಲೆಯ ಸ್ಥಾಪನೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.