ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಸಮರ್ಪಕವಾಗಿ ಕಬ್ಬು ನುರಿಸದಿರುವುದು, ಕಬ್ಬು ಕಟಾವು ಕಾರ್ಮಿಕರು, ರೈತರಿಗೆ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಇತರೆ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕುಮಾರ ಅವರು ಮಂಗಳವಾರ ಕಾರ್ಖಾನೆಗೆ ದಿಢೀರ್ ಭೇಟಿ ನೀಡಿ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ಅವರಿಂದ ಮಾಹಿತಿ ಪಡೆದು ಪರಿಶೀಲಿಸಿದರು.
ಕಾರ್ಖಾನೆಯ ಸಕ್ಕರೆ ಯಾಡ್ ಒಂಭತ್ತರಲ್ಲಿ ರೈತರಿಗೆ ಕಲ್ಪಿಸಿರುವ ಮೂಲ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ರೈತರಿಗೆ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿರುವ ಬಗ್ಗೆ ಖಾತ್ರಿ ಪಡಿಸುಕೊಂಡು, ಕ್ಯಾಂಟೀನ್ ತೆರೆಯಲು ಆಸಕ್ತಿ ಹೊಂದಿರುವವರಿಗೆ ಅವಕಾಶ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಖಾನೆಯಲ್ಲಿ ಕಬ್ಬಿನ ರಸ ವ್ಯರ್ಥವಾಗುತ್ತಿರುವುದರ ಮಾಹಿತಿ ಪಡೆದುಕೊಂಡು ಪರಿಶೀಲಿಸಿದಾಗ ಅಲ್ಲಿ ಪೈಪ್‌ಲೈನ್ ದುರಸ್ತಿಯಿಂದ ಹೊರಬರುತ್ತಿರುವ ಕಬ್ಬಿನ ಹಾಲನ್ನು ವ್ಯರ್ಥ ಮಾಡದಂತೆ ಸಂಗ್ರಹಿಸಿ ಕ್ರಮಕೈಗೊಂಡಿರುವ ಬಗ್ಗೆಯೂ ಅಧ್ಯಕ್ಷರು ವಿವರವಾಗಿ ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ನೀಡಿದರು.
ಕಾರ್ಖಾನೆಯಲ್ಲಿ ಕಬ್ಬು ನುರಿಸುವಲ್ಲಿ ಪ್ರತಿ ದಿನ ಸೂಚನಾ ಫಲಕದಲ್ಲಿ ಅನಾವರಣ ಮಾಡಿರುವುದು ಹಾಗೂ ರೈತರಿಗೆ ಮಾಹಿತಿ ನೀಡಲು ಸಿಬ್ಬಂದಿ ನಿಯೋಜಿಸಲಾಗಿದೆ ಎಂಬುದನ್ನು ಅಧ್ಯಕ್ಷರು ವಿವರಿಸಿದಾಗ, ನಿತ್ಯ 2,500 ಮೆಟ್ರಿಕ್ ಟನ್ ಕಬ್ಬು ನುರಿಸುವ ರೀತಿ ಕೆಲಸ ನಿರ್ವಹಿಸುವಂತೆ ಈಗಾಗಲೇ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಯಂತ್ರಗಳನ್ನು ಸುಸ್ಥಿತಿಯಲ್ಲಿ ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ಸಣ್ಣ ಪುಟ್ಟ ರಿಪೇರಿ ಇದ್ದಲ್ಲಿ ಕೂಡಲೇ ಕ್ರಮ ಕೈಗೊಳ್ಳಿ ಎಂದು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಕುಮಾರ ಅವರು ಸೂಚನೆ ನೀಡಿದರು.
ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮಂಗಲ್ ದಾಸ್, ಮುಖ್ಯ ಎಂಜಿನಿಯರ್ ವೀರೇಶ್ ಭಾಗವಹಿಸಿದ್ದರು.
‘ಸೌಲಭ್ಯ ಖಾತ್ರಿ ಪಡಿಸಿ’:
ಕಬ್ಬನ್ನು ಕಟಾವು ಮಾಡಲು ಹೊರ ಜಿಲ್ಲೆ ರಾಜ್ಯಗಳಿಂದಲೂ ಕಾರ್ಮಿಕರು ಆಗಮಿಸಿದ್ಧಾರೆ. ಅವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು. ಮೈಷುಗರ್ ಕಾರ್ಖಾನೆಯಲ್ಲಿ ಮತ್ತೊಮ್ಮೆ ಯಾವ ಆರೋಪಗಳು ಬರದಂತೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.