ಶ್ರೀರಂಗಪಟ್ಟಣ: ‘ಶೋಷಿತ ವರ್ಗದ ಜನರು ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳದಿದ್ದರೆ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿರುವ ಮೂರು ದಿನಗಳ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ಸಂವಿಧಾನದ ಆಶಯಗಳು ಈಡೇರಿಲ್ಲ. ಹಿಂದುಳಿದ ವರ್ಗದ ಜನರ ಮೂಲಭೂತ ಹಕ್ಕುಗಳನ್ನು ದಮನ ಮಾಡುವ ಕಾರ್ಯ ನಡೆಯುತ್ತಲೇ ಇದೆ. ಅಸ್ಪೃಶ್ಯತೆ ಆಚರಣೆ ಪ್ರಕರಣಗಳು ಈಗಲೂ ಬೆಳಕಿಗೆ ಬರುತ್ತಿವೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಹೇಳಿದರು.
ಜಿಲ್ಲಾಧಿಕಾರಿ ಕುಮಾರ ಶಿಬಿರವನ್ನು ಉದ್ಘಾಟಿಸಿದರು. ‘ಶೋಷಿತ ಸಮುದಾಯದ ಜನರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಸಂವಿಧಾನದ ಮೂಲ ಅಂಶಗಳನ್ನು ತಿಳಿಸಬೇಕು. ಹಣದ ಹಿಂದೆ ಬೀಳದೆ ವಿದ್ಯೆಯ ಹಿಂದೆ ಹೋಗಬೇಕು. ಅಕ್ಷರ ಜ್ಞಾನ ಇದ್ದರೆ ಹಣ ತನ್ನಿಂತಾನೇ ಬರುತ್ತದೆ. ಅಂಬೇಡ್ಕರ್ ಅವರು ಬರೆದ ಸಂವಿಧಾನ ಒಂದು ವರ್ಗಕ್ಕೆ ಸೀಮಿತವಾಗಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಮ ಸಮಾಜ ನಿರ್ಮಾಣ ಆಗಬೇಕು ಎಂಬುದು ಅವರ ಅಪೇಕ್ಷೆಯಾಗಿತ್ತು. ಈ ದಿಸೆಯಲ್ಲಿ ಯುವ ಪೀಳಿಗೆ ಚಿಂತಿಸಬೇಕು’ ಎಂದು ತಿಳಿಸಿದರು.
ತಾಲ್ಲೂಕಿನ ಕೆ.ಶೆಟ್ಟಹಳ್ಳಿಯ ವಿನಯವನ ಬುದ್ದ ವಿಹಾರದ ಬಂತೆ ಧಮ್ಮವೀರ ಸಾನಿಧ್ಯ ವಹಿಸಿದ್ದರು. ‘ಬುದ್ದನ ಪಂಚಶೀಲ ತತ್ವಗಳನ್ನು ಅನುಸರಿಸಬೇಕು’ ಎಂದು ಅವರು ಸಲಹೆ ನೀಡಿದರು.
ವಿಚಾರವಾದಿ ಕೃಷ್ಣಮೂರ್ತಿ ಚಮರಂ ‘ಡಾ.ಬಿ.ಆರ್. ಅಂಬೇಡ್ಕರ್ ಅವರ ಕನಸು ಮತ್ತು ಸಂವಿಧಾನದ ಮಹತ್ವ’ ಕುರಿತು ವಿಚಾರ ಮಂಡಿಸಿದರು.
ಕದಸಂಸ ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ. ಅನಿಲ್‌ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ. ಜಿ ಹೊಸಹಳ್ಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶಕುಮಾರ್ ಕೆ.ಶೆಟ್ಟಹಳ್ಳಿ, ನಗರ ಘಟಕದ ಅಧ್ಯಕ್ಷ ರಂಗಸ್ವಾಮಿ, ಸಂಪನ್ಮೂಲ ವ್ಯಕ್ತಿ ಶರಾವತಿ ಅಶ್ವತ್ಥ್, ಆನಂದ್ ಕ್ಯಾತನಹಳ್ಳಿ, ನಾಗರಾಜು ಈಚಗೆರೆ, ಮಹದೇವು ಕೊತ್ತತ್ತಿ, ಮುತ್ತುರಾಜ್ ನಗರಕೆರೆ, ಮೇಳಾಪುರ ಕರಿಯಪ್ಪ, ಬೆಳಗೊಳ ಬಸವಯ್ಯ, ಬೆಂಜಮಿನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.