ADVERTISEMENT

ಕುದುರೆ ನಂಬಿದವರ ಬದುಕು ಕಷ್ಟದಲ್ಲಿ

ಕೊರೊನಾದಿಂದ ಬದುಕು ದುಸ್ತರ: ಕನಿಷ್ಠ ನೆರವು ನೀಡಲು ಸರ್ಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಮೇ 2021, 4:22 IST
Last Updated 21 ಮೇ 2021, 4:22 IST
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಬಳಿ ಪ್ರವಾಸಿಗರನ್ನು ಕೂರಿಸಿಕೊಂಡು ಖುಷಿ ಕೊಡುತ್ತಿದ್ದ ಕುದುರೆಗಳು
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಬಳಿ ಪ್ರವಾಸಿಗರನ್ನು ಕೂರಿಸಿಕೊಂಡು ಖುಷಿ ಕೊಡುತ್ತಿದ್ದ ಕುದುರೆಗಳು   

ಶ್ರೀರಂಗಪಟ್ಟಣ: ಪಟ್ಟಣದ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರನ್ನು ತಮ್ಮ ಕುದುರೆಗಳ ಮೇಲೆ ಕೂರಿಸಿ, ಸುತ್ತು ಹೊಡೆಸಿ ಅದರಿಂದ ಸಿಗುವ ಒಂದಷ್ಟು ಕಾಸಿನಿಂದಲೇ ಜೀವನ ನಡೆಸುತ್ತಿದ್ದವರನ್ನು ಕೊರೊನಾ ವೈರಸ್‌ ಕಡು ಕಷ್ಟಕ್ಕೆ ನೂಕಿದೆ.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮತ್ತು ಸಮೀಪದ ಗಂಜಾಂನ ಟಿಪ್ಪು ಸಮಾಧಿ ಸ್ಥಳ ಗುಂಬಸ್‌ ಬಳಿ 30ಕ್ಕೂ ಹೆಚ್ಚು ಮಂದಿ ಹಲವು ದಶಕಗಳಿಂದ ಕುದುರೆಗಳನ್ನು ನೆಚ್ಚಿಕೊಂಡೇ ಬದುಕು ಕಟ್ಟಿಕೊಂಡಿದ್ದಾರೆ. ಅದರಿಂದ ಸಿಗುವ ಹಣದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ಅಮರಿಕೊಂಡ ಕೊರೊನಾ ವೈರಸ್‌ನಿಂದಾಗಿ ಇಲ್ಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿ ನಿಂತು ಹೋದ ಪರಿಣಾಮ ಪ್ರವಾಸಿಗರನ್ನೇ ನೆಚ್ಚಿಕೊಂಡಿದ್ದ ಕುದುರೆ ಮಾಲೀಕರು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಕುದುರೆಗಳನ್ನು ನಡೆಸುತ್ತಿದ್ದವರಿಗೆ ನಯಾ ಪೈಸೆಯೂ ಹುಟ್ಟುತ್ತಿಲ್ಲ. ಸದ್ಯ ಕುದುರೆಗಳಿಗೆ ಮೇವು ಒದಗಿಸುವುದೇ ಇವರಿಗೆ ದುಸ್ತರವಾಗಿದೆ.

‘ಲಕ್ಷಗಟ್ಟಲೆ ಹಣ ಕೊಟ್ಟು ಮಹಾರಾಷ್ಟ್ರದಿಂದ ಆಕರ್ಷಕವಾದ ಕುದುರೆಗಳನ್ನು ತಂದಿದ್ದೇವೆ. ಪ್ರವಾಸಿಗರು ನಮ್ಮ ಕುದುರೆ ಏರಿದರಷ್ಟೇ ನಮ್ಮ ಬದುಕು ಸಾಗುತ್ತದೆ. ಆದರೆ ಒಂದು ವರ್ಷದಿಂದ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ. ಅಪ್ಪಿತಪ್ಪಿ ಜನರು ಬಂದರೂ ಕುದುರೆ ಏರುತ್ತಿಲ್ಲ. ಕುದುರೆಗಳನ್ನು ಮಾರಾಟ ಮಾಡುವ ಸ್ಥಿತಿಗೆ ಬಂದಿದ್ದೇವೆ. ಸದ್ಯಕ್ಕೆ ಕೊಳ್ಳುವವರೂ ಇಲ್ಲದೆ ದಿಕ್ಕು ಕಾಣದಂತಾಗಿದ್ದೇವೆ’ ಎಂದು ಕುದುರೆ ಮಾಲೀಕರು ತಮ್ಮ ಸಂಕಷ್ಟ ತೋಡಿಕೊಳ್ಳುತ್ತಾರೆ.

ADVERTISEMENT

‘ಒಂದು ಕುದುರೆಗೆ ದಿನವೊಂದಕ್ಕೆ ₹ 300ರಿಂದ ₹ 500 ಖರ್ಚು ಬರುತ್ತದೆ. ಒಂದು ವರ್ಷದಿಂದ ಆದಾಯ ಇಲ್ಲದ ಕಾರಣ ಸಾಲ ಮಾಡಿ ಕುದುರೆಗಳನ್ನು ಸಾಕುತ್ತಿದ್ದೇವೆ. ಮೇವು ಒದಗಿಸುವುದೇ ಕಷ್ಟವಾಗಿದೆ. ಇತರ ವರ್ಗದ ಶ್ರಮಿಕರಿಗೆ ನೆರವು ಘೋಷಿಸಿರುವಂತೆ ಕುದುರೆ ನಂಬಿಕೊಂಡಿರುವ ನಮಗೂ ಸರ್ಕಾರ ನೆರವು ನೀಡಬೇಕು’ ಎಂದು ಕುದುರೆ ಮಾಲೀಕ ರಘು (ಕುದುರೆ ರಘು) ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.