ADVERTISEMENT

ಯುವಕ–ಅಧಿಕಾರಿಯಿಂದ ಆಣೆ ಪ್ರಮಾಣ

ಸಚಿವ ನಾರಾಯಣಗೌಡರ ಕ್ಷೇತ್ರದಲ್ಲಿ ನಡೆದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 19:14 IST
Last Updated 4 ನವೆಂಬರ್ 2020, 19:14 IST
ಕೆ.ಆರ್..ಪೇಟೆ ಪಟ್ಟಣದ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿನ ನವಗ್ರಹ ದೇವಸ್ಥಾನದ ಮುಂಭಾಗದಲ್ಲಿ ಲಂಚದ ಹಣದ ವಿಚಾರವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲ್ಲೂಕು ವಿಸ್ತರಣಾಧಿಕಾರಿ ಕೃಷ್ಣಪ್ಪ, ಹರೀಶ್ ಎಂಬುವವರು ಆಣೆ-ಪ್ರಮಾಣ ಮಾಡಿದರು
ಕೆ.ಆರ್..ಪೇಟೆ ಪಟ್ಟಣದ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಆವರಣದಲ್ಲಿನ ನವಗ್ರಹ ದೇವಸ್ಥಾನದ ಮುಂಭಾಗದಲ್ಲಿ ಲಂಚದ ಹಣದ ವಿಚಾರವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲ್ಲೂಕು ವಿಸ್ತರಣಾಧಿಕಾರಿ ಕೃಷ್ಣಪ್ಪ, ಹರೀಶ್ ಎಂಬುವವರು ಆಣೆ-ಪ್ರಮಾಣ ಮಾಡಿದರು   

ಕೆ.ಆರ್.ಪೇಟೆ: ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಲಂಚಕೊಟ್ಟೆ ಎಂದು ಅಧಿಕಾರಿಗೆ ಲಂಚ ಕೊಟ್ಟಿದ್ದೇನೆ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದಾರೆ. ತಾನು ಯಾವುದೇ ಲಂಚ ಪಡೆದಿಲ್ಲ ಎಂದು ಸರ್ಕಾರಿ ಅಧಿಕಾರಿ ಕೂಡ ಅದೇ ದೇವಸ್ಥಾನದ ಬುಧವಾರ ಮುಂದೆ ಪ್ರಮಾಣ ಮಾಡಿದ್ದಾರೆ.

ಆಗಿದ್ದೇನು: ಹೊಸಹೊಳಲು ಗ್ರಾಮದ ಹರೀಶ್ ಎಂಬುವವರು ಅಧಿಕಾರಿ ಮೇಲೆ ಆರೋಪ ಹೊರೆಸಿ ‘ನಾನು ಮತ್ತು ನನ್ನ ಸ್ನೇಹಿತ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ತಲಾ ₹5ಲಕ್ಷ ಸಾಲ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ್ದೆನು. ಸಾಲ ಮಂಜೂರಾತಿಗೆ ನನ್ನ ತಾಯಿಯ ಒಡವೆಗಳನ್ನು ಗಿರವಿಯಿಟ್ಟು ₹1 ಲಕ್ಷ ಲಂಚದ ಹಣವನ್ನು ನಿಗಮದ ವಿಸ್ತರಣಾಧಿಕಾರಿ ಕೃಷ್ಣಪ್ಪನಿಗೆ ನೀಡಿದ್ದೇನೆ. ನಾನು ಕರೆ ಮಾಡಿ ವಿಚಾರಿಸಿದ ವೇಳೆ, ಕೆಲಸ ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದ್ದರು. ಕಳೆದೊಂದು ವಾರದಿಂದ ನನಗೂ ನಿನ್ನ ಸಾಲದ ಅರ್ಜಿಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಇದರಿಂದ ಬೇಸತ್ತು ಪ್ರಮಾಣ ಮಾಡಲು ಕರೆದಿದ್ದೇನೆ. ದೇವರ ಮುಂದೆ ನಾನು ಹೇಳಿರುವುದೆಲ್ಲವೂ ಸತ್ಯ’ ಎಂದು ಲಕ್ಷ್ಮೀನಾರಾಯಣ ದೇವಾಲಯದ ನವಗ್ರಹ ಗುಡಿಯ ಮುಂದೆ ಹಾರ ಹಾಕಿಕೊಂಡು ಪ್ರಮಾಣ ಮಾಡಿದರು.

ಇದಕ್ಕೆ ಪ್ರತಿಯಾಗಿ ಪ್ರಮಾಣ ಮಾಡಿದ ಅಧಿಕಾರಿ ಕೃಷ್ಣಪ್ಪ ‘ಕಳೆದ ಏಳೆಂಟು ವರ್ಷಗಳಿಂದ ತಾಲೂಕಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿಸ್ತರಣಾಧಿಕಾರಿಯಾಗಿ ನಾನು ಕೆಲಸ ಮಾಡ್ತಿದ್ದೇನೆ. ನನ್ನ ವಿರುದ್ದ ಆರೋಪ ಮಾಡಿರುವ ಹೊಸಹೊಳಲು ಗ್ರಾಮದ ಹರೀಶ್ ಎಂಬುವವರಿಂದ ನಾನು ಒಂದು ಪೈಸೆ ಕೂಡ ಲಂಚ ತಗೊಂಡಿಲ್ಲ. ಸರ್ಕಾರಿ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಹರೀಶ್ ಒತ್ತಡ ತಾಳಲಾರದೆ ಪ್ರಮಾಣ ಮಾಡಲು ಬಂದಿದ್ದೇನೆ. ಈತ ಹೇಳುತ್ತಿರುವುದೆಲ್ಲಾ ಸುಳ್ಳಿನ ಕಂತೆಯಾಗಿದೆ’ ಎಂದು ಪ್ರಮಾಣ ಮಾಡಿ ಹಾರ ಹಾಕಿಕೊಂಡಿದ್ದಾರೆ.

ADVERTISEMENT

ದೇವರ ಮುಂದೆ ಪ್ರಮಾಣ ಮಾಡಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.