ADVERTISEMENT

ಕ್ರೈಸ್ತ ಪಾದ್ರಿಯು ‘ದೊಡ್ಡ ಸ್ವಾಮಿ’ ಆದ ಕತೆ!

ಸಾಂಕ್ರಾಮಿಕ ರೋಗಗಳಿಗೆ ಲಸಿಕೆ ನೀಡಿದ್ದ ಫಾದರ್‌, ಹಿಂದೂ ಆಚರಣೆಗಳಿಗೆ ಗೌರವ

ಗಣಂಗೂರು ನಂಜೇಗೌಡ
Published 23 ಡಿಸೆಂಬರ್ 2022, 23:45 IST
Last Updated 23 ಡಿಸೆಂಬರ್ 2022, 23:45 IST
ಫಾ.ಅಬ್ಬೆದುಬ್ವಾ
ಫಾ.ಅಬ್ಬೆದುಬ್ವಾ   

ಶ್ರೀರಂಗಪಟ್ಟಣ: ಕ್ರಿ.ಶ.1799ರಲ್ಲಿ ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ಸೋತು ರಣರಂಗದಲ್ಲಿ ಪ್ರಾಣಾರ್ಪಣೆ ಮಾಡಿದ ಮರು ವರ್ಷ ಈ ದ್ವೀಪ ನಗರಿಗೆ ಬಂದ ಫ್ರಾನ್ಸ್‌ ದೇಶದ ಕ್ರೈಸ್ತ ಪಾದ್ರಿ ಫಾ.ಅಬ್ಬೆದುಬ್ವಾ ಸ್ಥಳೀಯ ಜನರಿಂದ ‘ದೊಡ್ಡ ಸ್ವಾಮಿ’ ಎಂಬ ಅಭಿದಾನ ಪಡೆದದ್ದು ರೋಮಾಂಚನ ಮೂಡಿಸುತ್ತದೆ.

ಕನ್ನಡ ಭಾಷೆಯೇ ಬಾರದ, ಹಿಂದೂ ಧರ್ಮದ ಆಚಾರ, ವಿಚಾರಗಳ ಗಂಧ ಗಾಳಿಯೇ ಗೊತ್ತಿಲ್ಲದ ಯೂರೋಪ್‌ ಮೂಲದ ಕ್ರೈಸ್ತ ಧರ್ಮ ಪ್ರಚಾರಕ 21 ವರ್ಷಗಳ ಕಾಲ ಇಲ್ಲಿ ನೆಲೆನಿಂತು, ಈ ಊರಿನವರೇ ಆಗಿ ಜನರ ಮನಸ್ಸು ಗೆದ್ದದ್ದು ಅಚ್ಚರಿ ಮೂಡಿಸುತ್ತದೆ. ಪ್ಯಾರಿಸ್‌ನ ವಿದೇಶಿ ಮಿಷನರಿಗೆ (ಎಂಇಪಿ)ಗೆ ಸೇರಿದ ಫಾ.ಅಬ್ಬೆದುಬ್ವಾ ಪುದುಚೆರಿ, ಕೊಯಮತ್ತೂರು, ಧರ್ಮಪುರಿಗಳಲ್ಲಿ ಕೆಲಕಾಲ ಕ್ರೈಸ್ತರ ಆಧ್ಯಾತ್ಮಿಕ ಬಯಕೆ ಈಡೇರಿಸಿ ಕ್ರಿ.ಶ.1800ರಲ್ಲಿ ಗಂಜಾಂಗೆ ಬಂದರು.

ಗಂಜಾಂನ ಗುಂಬಸ್‌ ರಸ್ತೆ ಪಕ್ಕದಲ್ಲಿ ರೋಮನ್‌ ಶೈಲಿಯ ಚರ್ಚ್‌ ಸ್ಥಾಪಿದರು. ಸ್ಥಳೀಯರು ಶೇ 95ರಷ್ಟು ಮಂದಿ ಅನಕ್ಷರಸ್ಥರು ಎಂಬುದನ್ನು ಮನಗಂಡ ಅವರು ಚರ್ಚ್ ಆವರಣದಲ್ಲಿ ಶಾಲೆ ತೆರೆದು ಶಿಕ್ಷಣ ನೀಡಿದರು. ತಾವು ಕನ್ನಡ ಕಲಿತು ಸ್ಥಳೀಯರಿಗೆ ಕನ್ನಡ ಮತ್ತು ಇಂಗ್ಲಿಷ್‌ ಕಲಿಸಿದ ಕೀರ್ತಿ ಫಾ.ಅಬ್ಬೆದುಬ್ವಾ ಅವರಿಗೆ ಸಲ್ಲುತ್ತದೆ.

ADVERTISEMENT

19ನೇ ಶತಮಾನದ ಆರಂಭದಲ್ಲಿ ಮಾರಣಾಂತಿಕ ಎನಿಸಿದ್ದ ‘ಸಿಡುಬು’ ರೋಗಕ್ಕೆ ಚುಚ್ಚು ಮದ್ದು ನೀಡಿದ ಫಾ.ಅಬ್ಬೆದುಬ್ವಾ ನೂರಾರು ಜನರನ್ನು ಸಾವಿನ ದವಡೆಯಿಂದ ಪಾರು ಮಾಡಿದರು. ‘ಕಾಲರಾ’ ಮತ್ತು ‘ಪ್ಲೇಗ್‌’ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಮೌಢ್ಯ ಆಚರಣೆಗಳ ದುಷ್ಪರಿಣಾಮಗಳನ್ನು ತಿಳಿಸಿದರು. ಶುದ್ಧ ಆಹಾರ ಮತ್ತು ನೀರು ಸೇವಿಸುವಂತೆ ಮನೆ ಮನೆಗೆ ತೆರಳಿ ತಿಳಿ ಹೇಳಿದರು. ಕ್ರೈಸ್ತನಾಗಿ ಏನೇ ಹೇಳಿದರೂ ಜನರು ತಮ್ಮ ಮಾತು ಕೇಳುವುದಿಲ್ಲ ಎಂಬುದನ್ನು ಅರಿತ ಫಾ. ದುಬ್ವಾ ಹಿಂದೂ ಸನ್ಯಾಸಿಯಂತೆ ಉಡುಗೆ– ತೊಡುಗೆ ತೊಟ್ಟು ಜನರನ್ನು ಆಕರ್ಷಿಸಿದರು. ಚರ್ಚ್‌ಗೆ ‘ಅಮಲೋದ್ಭವ ಮಾತೆಯ ಮಂದಿರ’ ಎಂದು ಹೆಸರಿಟ್ಟರು. ಆ ಮೂಲಕ ಗಂಜಾಂ ಮತ್ತು ಆಸುಪಾಸಿನ ಗ್ರಾಮಗಳ ಜನರಿಂದ ‘ದೊಡ್ಡ ಸ್ವಾಮಿಯೋರು’ ಎಂದು ಕರೆಸಿಕೊಳ್ಳುವ ಮಟ್ಟಿಗೆ ಪ್ರಸಿದ್ಧಿ ಪಡೆದರು.

ಕೃತಿ ರಚನೆ: ಗಂಜಾಂನಲ್ಲಿ 21 ವರ್ಷಗಳ ಕಾಲ ನೆಲೆ ನಿಂತಿದ್ದ ಫಾ. ಅಬ್ಬೆದುಬ್ವಾ ಇಲ್ಲಿನ ಜನರ ಆಚಾರ– ವಿಚಾರ, ಹಬ್ಬ– ಹರಿದಿನಗಳು, ಆಹಾರ ಪದ್ದತಿಗಳ ಕುರಿತು ‘ಹಿಂದೂ ಮ್ಯಾನರ್ಸ್‌, ಕಸ್ಟಮ್ಸ್‌ ಅಂಡ್‌ ಸೆರಮನೀಸ್‌‘ ಹೆಸರಿನ ಕೃತಿ ರಚಿಸಿದರು.

ಧರ್ಮ ಪ್ರಚಾರಕ್ಕಿಂತ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಮುತುವರ್ಜಿಯಿಂದ ಸೇವೆ ಸಲ್ಲಿಸಿದ ಫಾ.ಅಬ್ಬೆದುಬ್ವಾ 1821ರಲ್ಲಿ ಫ್ರಾನ್ಸ್‌ಗೆ ಹೊರಟು ನಿಂತಾಗ ತಮ್ಮ ನೆಚ್ಚಿನ ’ದೊಡ್ಡ ಸ್ವಾಮಿಯೋರು‘ ಹೊರಟ ಸುದ್ದಿ ಕೇಳಿ ಸ್ಥಳೀಯರು ಕಂಬನಿ ಮಿಡಿದರು ಎಂದು ಅಂದಿನ ಕ್ರೈಸ್ತ ಮಿಷನರಿಗಳು ಉಲ್ಲೇಖಿಸಿವೆ.

ಸ್ಥಳೀಯ ಜನರ ಮನಸ್ಸು ಗೆಲ್ಲುವಲ್ಲಿ ಸಾಫಲ್ಯ ಕಂಡಿದ್ದ ಫಾ.ಅಬ್ಬೆದುಬ್ವಾ ಫ್ರಾನ್ಸ್‌ನಲ್ಲಿ 1823ರಲ್ಲಿ ಇಹಲೋಕ ತ್ಯಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.