ಶ್ರೀರಂಗಪಟ್ಟಣ : ‘ಇಸ್ಲಾಂ ಧರ್ಮದ ಹೆಸರಿನಲ್ಲಿ ಕಾಶ್ಮೀರದಲ್ಲಿ ನರಮೇಧ ನಡೆಸಿರುವವರು ನೈಜ ಮುಸ್ಲಿಮರಲ್ಲ. ನೈಜ ಮುಸ್ಲಿಮರಲ್ಲಿ ಪ್ರೀತಿ, ಕರುಣೆ, ಪರಸ್ಪರ ಸಹಕಾರ ಮನೋಭಾವ ಇರುತ್ತದೆ’ ಎಂದು ಲೇಖಕಿ ಬಾನು ಮುಷ್ತಾಕ್ ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಮುಸ್ಲಿಂ ಸೌಹಾರ್ದ ಒಕ್ಕೂಟದ ವಾರ್ಷಿಕೋತ್ಸವ ಮತ್ತು ‘ಸೌಹಾರ್ದ ಸೇತು ಸಾಧಕ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
‘ಕಾಶ್ಮೀರದಲ್ಲಿ ಪೈಶಾಚಿಕ ಕೃತ್ಯ ನಡೆಸಿರುವ ದುರುಳರು ಇಸ್ಲಾಂ ಧರ್ಮದ ತತ್ವವನ್ನೇ ಕೊಲೆ ಮಾಡಿದ್ದಾರೆ. ಮಕ್ಕಳು ಮತ್ತು ಪತ್ನಿಯ ಎದುರು ಅಮಾಯಕರನ್ನು ಹತ್ಯೆ ಮಾಡಿರುವುದು ಅರಗಿಸಿಕೊಳ್ಳಲಾಗದ ಕೃತ್ಯ’ ಎಂದು ಬೇಸರ ವ್ಯಕ್ತಪಡಿಸಿದರು.
‘ಅಮೆರಿಕ ತನ್ನ ಸ್ವಾರ್ಥಕ್ಕಾಗಿ ಅಲ್–ಖೈದಾ ಮತ್ತು ತಾನಿಬಾನಿ ಉಗ್ರರನ್ನು ಬೆಳೆಸುತ್ತಿದೆ ಎಂದು ಹಿಲರಿ ಕ್ಲಿಂಟನ್ ಅವರೇ ಹೇಳಿದ್ದಾರೆ. ಇನ್ನಾದರೂ ಉಗ್ರವಾದ ಪೋಷಿಸುವುದನ್ನು ನಿಲ್ಲಿಸಬೇಕು’ ಎಂದರು.
‘ದೇಶದಲ್ಲಿನ ವೈವಿಧ್ಯವನ್ನು ಒಪ್ಪಿಕೊಂಡು ಅನುಮಾನಕ್ಕೆ ಆಸ್ಪದ ಇಲ್ಲದಂತೆ ಬದುಕಬೇಕು. ರಾಜಕಾರಣ ಆಯಾ ಪ್ರದೇಶದ ಅಭಿವೃದ್ಧಿಯ ಸೂಚ್ಯಂಕದ ಆಧಾರದ ಮೇಲೆ ನಡೆಯಬೇಕೇ ಹೊರತು ಧರ್ಮ ಅಥವಾ ಜಾತಿಯ ಆಧಾರದಲ್ಲಲ್ಲ. ಮನುಷ್ಯರ ನೆಮ್ಮದಿಗೆ ಪೂರಕವಾದ ಸೌಕರ್ಯ ಕಲ್ಪಿಸುವುದೇ ಆಳುವವರ ಆದ್ಯತೆಯಾಗಬೇಕು’ ಎಂದು ಹೇಳಿದರು.
ಬಾನು ಮುಷ್ತಾಕ್, ಬಿ.ಸುಜಯಕುಮಾರ್, ಪತ್ರಕರ್ತ ಕೆ.ದೀಪಕ್, ನಾಗಮಂಗಲ ತಾಲ್ಲೂಕು ಹೊನ್ನಾವರ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಟಿಪ್ಪು ಸುಲ್ತಾನ್ ಹಾಗೂ ಕುಸ್ತಿಪಟು ಪೈ. ಗಿರೀಶ್ ಅವರಿಗೆ ‘ಸೌಹಾರ್ದ ಸೇತು ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಭಾರತದಲ್ಲಿ ವಾಸಿಸುವ ಮುಸ್ಲಿಂ ಕ್ರೈಸ್ತರ ಪೂರ್ವಜರು ಹಿಂದೂಗಳೇ ಆಗಿದ್ದು ಹಿಂದೂ ಬೌದ್ಧ ಜೈನ ಧರ್ಮೀಯರ ಜತೆ ಇವರಿಗೆ ಸಹೋದರತ್ವದ ನಂಟಿದೆಬಾನು ಮುಷ್ತಾಕ್ ಲೇಖಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.