
ಶ್ರೀರಂಗಪಟ್ಟಣ: ಪಕ್ಷಿಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೆ ವಂಶಾಭಿವೃದ್ಧಿಗಾಗಿ ಪಕ್ಷಿಗಳು ಬರಲಾರಂಭಿಸಿವೆ.
ಚುಮುಚುಮು ಚಳಿ ಶುರುವಾಗುತ್ತಿದ್ದಂತೆ ಪಕ್ಷಿಗಳು ಇಲ್ಲಿಗೆ ಬರುತ್ತಿವೆ. ಒಂದು ವಾರದಿಂದ ದೇಶ, ವಿದೇಶಗಳ ಪಕ್ಷಿಗಳ ಆಗಮನ ಶುರುವಾಗಿದೆ. ಪಕ್ಷಿಧಾಮದಲ್ಲಿ ದಿನದಿಂದ ದಿನಕ್ಕೆ ಪ್ರಕೃತಿ ಆಭರಣಗಳಾದ ಪಕ್ಷಿಗಳ ಕಲರವ ಹೆಚ್ಚುತ್ತಿದೆ. ಈಗಾಗಲೇ ಏಷ್ಯನ್ ಓಪನ್ ಬಿಲ್ ಸ್ಟಾರ್ಕ್ (ಬಾಯ್ಕಳಕ), ಪೇಂಟೆಡ್ ಸ್ಟಾರ್ಕ್ (ಕೆಂಬರಲು) ಪೆಲಿಕಾನ್ (ಹೆಜ್ಜಾರ್ಲೆ) ಪಕ್ಷಿಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬಂದಿಳಿದಿವೆ. ಈ ಪೈಕಿ 500ಕ್ಕೂ ಹೆಚ್ಚು ಪೆಲಿಕಾನ್ ಜಾತಿಯ ಪಕ್ಷಿಗಳು ಬಂದಿವೆ. 50 ಜತೆಗೂ ಹೆಚ್ಚು ಏಷ್ಯನ್ ಓಪನ್ ಬಿಲ್ ಸ್ಟಾರ್ಕ್, ಹತ್ತಾರು ಜೊತೆ ಪೇಂಟೆಡ್ ಸ್ಟಾರ್ಕ್ ಪಕ್ಷಿಗಳು ಇಲ್ಲಿಗೆ ಬಂದಿದ್ದು ಮರಗಳ ಮೇಲೆ ನೆಲೆಯೂರಿವೆ. ಬ್ಲಾಕ್ ಹೆಡೆಡ್ ಐಬಿಸ್‌ಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಬಂದಿವೆ.
ಈ ತಿಂಗಳ ಅಂತ್ಯದ ವೇಳೆಗೆ ಎರಡು ಸಾವಿರಕ್ಕೂ ಹೆಚ್ಚು ಪೇಂಟೆಡ್ ಸ್ಟಾರ್ಕ್, ಎರಡು ಸಾವಿರದಷ್ಟು ಓಪನ್‌ಬಿಲ್ ಸ್ಟಾರ್ಕ್, ಒಂದೂವರೆ ಸಾವಿರ ಸ್ಪೂನ್ ಬಿಲ್ ಸ್ಟಾರ್ಕ್, ರಿವರ್ ಟರ್ನ್, ಸ್ಟೋನ್ ಫ್ಲವರ್ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಪಕ್ಷಿಗಳು ಬರಲಿದ್ದು, ಫೆಬ್ರವರಿ ವೇಳೆಗೆ ಇಲ್ಲಿ ಪಕ್ಷಿಗಳ ಜಾತ್ರೆಯೇ ಸೇರಲಿದೆ.
ಪೆಲಿಕಾನ್ ಜಾತಿಯ ಪಕ್ಷಿಗಳು ಕಾವೇರಿ ನದಿಯ ನಡುಗಡ್ಡೆಗಳಲ್ಲಿರುವ ಎತ್ತರದ ಮರಗಳ ಬೀಡು ಬಿಟ್ಟಿದ್ದು ಗೂಡು ಕಟ್ಟಲು ತಾವು ಹುಡುಕುತ್ತಿವೆ. ಈ ಪಕ್ಷಿಗಳ ಗುಂಪು ಗುಂಪಾಗಿ ಕಂಡು ಬರುತ್ತಿದ್ದು, ಮರಗಳ ಎಲೆಗಳ ಮೇಲೆ ಮೊಸರು ಚೆಲ್ಲಿದಂತೆ ಕಂಡು ಬರುತ್ತಿವೆ. ಗೂಡು ಕಟ್ಟಲು ಬೇಕಾದ ಕಡ್ಡಿ, ಸೊಪ್ಪುಗಳನ್ನು ಹೊತ್ತೊಯ್ಯುವ ದೃಶ್ಯ ಸಾಮಾನ್ಯವಾಗಿವೆ. ಪಕ್ಷಿಧಾಮ ಮತ್ತು ಆಸುಪಾಸಿನಲ್ಲಿ ಕಾರ್ಮೊರೆಂಟ್, ಹೆರೋನ್, ರೆಡ್ ಲ್ಯಾಪಿಂಗ್ (ರುಧಿರ ಟಿಟ್ಟಿಭ) ಜಾತಿಯ ಪಕ್ಷಿಗಳು ಕೂಡ ಕಂಡು ಬರುತ್ತಿವೆ.
‘ರಶಿಯಾ, ಸೈಬೀರಿಯಾ, ಶ್ರೀಲಂಕಾ ಇತರ ದೇಶಗಳು ಹಾಗೂ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಿಂದಲೂ ಪಕ್ಷಿಗಳು ರಂಗನತಿಟ್ಟಿಗೆ ವಂಶಾಭಿವೃದ್ಧಿಗಾಗಿ ಬರುತ್ತವೆ. ಆರೇಳು ತಿಂಗಳ ಕಾಲ ಪಕ್ಷಿಧಾಮದಲ್ಲಿ ಬಗೆ ಬಗೆ ಜಾತಿ ಮತ್ತು ಬಣ್ಣದ ಸಹಸ್ರಾರು ಪಕ್ಷಿಗಳನ್ನು ಕಣ್ತುಂಬಿಕೊಳ್ಳಬಹುದು’ ಎಂದು ಇಲ್ಲಿ 6 ವರ್ಷಗಳಿಂದ ದೋಣಿ ನಡೆಸುತ್ತಿರುವ ವಿಶ್ವನಾಥ್ ಹೇಳುತ್ತಾರೆ.
ಜೂನ್ ವೇಳೆಗೆ ಮರಿಗಳ ಜತೆ ನಿರ್ಗಮನ
‘ಪ್ರತಿ ವರ್ಷ ಚಳಿಗಾಲದಲ್ಲಿ ಇಲ್ಲಿಗೆ ದೇಶ ವಿದೇಶಗಳಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ. ಈ ಸಮಯದಲ್ಲಿ ಇಲ್ಲಿ ಅವುಗಳಿಗೆ ಸಮೃದ್ಧವಾದ ಆಹಾರ ಕೂಡ ಸಿಗುತ್ತದೆ. ಮಾರ್ಚ್ ಹೊತ್ತಿಗೆ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಜೂನ್ ವೇಳೆಗೆ ಮರಿಗಳ ಜತೆ ಹಾರಿ ಹೋಗುತ್ತವೆ’ ಎಂದು ಪಕ್ಷಿಧಾಮದ ಅರಣ್ಯಪಾಲಕ ಲಕ್ಷ್ಮಣ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.