ADVERTISEMENT

ಸ್ಕೂಟರ್‌ ಪಂಕ್ಚರ್‌ ಮಾಡಿ ₹ 10 ಲಕ್ಷ ಹಣ ಕಳ್ಳತನ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 11:26 IST
Last Updated 29 ಜೂನ್ 2019, 11:26 IST
ಸಯ್ಯದ್‌ ಸಮೀಉಲ್ಲಾ
ಸಯ್ಯದ್‌ ಸಮೀಉಲ್ಲಾ   

ಮಂಡ್ಯ: ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ತೆರಳುತ್ತಿದ್ದ ವ್ಯಕ್ತಿಯೊಬ್ಬರ ಸ್ಕೂಟರ್‌ ಪಂಕ್ಚರ್‌ ಮಾಡಿ, ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು ಡಿಕ್ಕಿಯಲ್ಲಿದ್ದ ₹10 ಲಕ್ಷ ಹಣವನ್ನು ಅಶೋಕ್‌ನಗರ 3ನೇ ಮುಖ್ಯರಸ್ತೆಯಲ್ಲಿ ಶನಿವಾರ ಕಳ್ಳತನ ಮಾಡಿದ್ದಾರೆ.

ಮಾರುತಿನಗರದ ನಿವಾಸಿ, ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮನ್‌ಮುಲ್‌) ನಿವೃತ್ತ ನೌಕರ ಸಯ್ಯದ್‌ ಸಮೀಉಲ್ಲಾ ಹಣ ಕಳೆದುಕೊಂಡವರು. ಮಧ್ಯಾಹ್ನ 1.30ರಲ್ಲಿ ನಗರದ ಕೆ.ಆರ್‌.ರಸ್ತೆಯಲ್ಲಿರುವ ಕಾರ್ಪೊರೇಷನ್‌ ಬ್ಯಾಂಕ್‌ನಲ್ಲಿ ₹10 ಲಕ್ಷ ಹಣ ಡ್ರಾ ಮಾಡಿದ್ದಾರೆ. ಸ್ಕೂಟರ್‌ ಡಿಕ್ಕಿಯಲ್ಲಿ ಹಣ ಇಟ್ಟುಕೊಂಡು ಮನೆಯ ಕಡೆಗೆ ಹೊರಟಿದ್ದಾರೆ.

ಸಮೀಪದಲ್ಲೇ ಇದ್ದ ಗಾಂಧಿಭವನದ ಮುಂದಕ್ಕೆ ಬರುವಷ್ಟರಲ್ಲಿ ಸ್ಕೂಟರ್‌ ಹಿಂಭಾಗದ ಟೈರ್‌ ಪಂಕ್ಚರ್‌ ಆಗಿರುವುದು ಗೊತ್ತಾಗಿದೆ.
ಸಯ್ಯದ್‌ ಅಶೋಕ್‌ನಗರ 3ನೇ ಮುಖ್ಯರಸ್ತೆಯಲ್ಲಿರುವ ಗ್ಯಾರೇಜ್‌ ಬಳಿ ತೆರಳಿ ಪಂಕ್ಚರ್‌ ಹಾಕಲು ತಿಳಿಸಿ ಅಂಗಡಿ ಮುಂದೆ ಕುಳಿತಿದ್ದಾರೆ. ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಕಲಿ ಕೀ ಬಳಸಿ 30 ಸೆಕೆಂಡ್‌ನೊಳಗೆ ಡಿಕ್ಕಿ ತೆರೆದು ಬ್ಯಾಗ್‌ನಲ್ಲಿ ಇಟ್ಟಿದ್ದ ಹಣ ಕದ್ದು ಪರಾರಿಯಾಗಿದ್ದಾರೆ.

ADVERTISEMENT

‘ನಾನು ಗ್ಯಾರೇಜ್‌ ಮುಂದೆ ಕುಳಿತಿದ್ದೆ. ನಾಲ್ವರು ಮುಂದಿನ ರಸ್ತೆಯಲ್ಲಿ ಎರಡು ಬಾರಿ ಓಡಾಡಿದ್ದನ್ನು ಗಮನಿಸಿದೆ. ಅವರಲ್ಲಿ ಇಬ್ಬರು ಬೈಕ್‌ನಲ್ಲಿ ಬಂದು ಕಣ್ಣು ಬಿಟ್ಟು ತೆರೆಯುವಷ್ಟರಲ್ಲಿ ಹಣ ಎಗರಿಸಿದರು. ಕಳ್ಳರನ್ನು ನಾನು ನೋಡಿದ್ದು ಅವರನ್ನು ಗುರುತಿಸುತ್ತೇನೆ. ಟೈರ್‌ಗೆ ಮುಳ್ಳು, ಮೊಳೆ ಚುಚ್ಚಿಲ್ಲ. ಯಾರೋ ಪಂಕ್ಚರ್‌ ಮಾಡಿರುವಂತಿದೆ ಎಂದು ಮೆಕ್ಯಾನಿಕ್‌ ಹೇಳಿದ. ಆತ ಹೇಳಿದ ಒಂದೆರಡು ನಿಮಿಷದಲ್ಲಿ ಕಳ್ಳತನವಾಯಿತು’ ಎಂದು ಹಣ ಕಳೆದುಕೊಂಡ ಸಯ್ಯದ್‌ ಸಮೀಉಲ್ಲಾ ಹೇಳಿದರು.

ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎ.ಆರ್‌.ಬಲರಾಮೇಗೌಡ, ಡಿವೈಎಸ್‌ಪಿ ಗಂಗಾಧರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೂರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.