ಮಂಡ್ಯ: ‘ರಾತ್ರಿ ವೇಳೆ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದು, ₹47 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
‘ಜಿಲ್ಲೆಯ ಅಣ್ಣೂರು ಶೇಖರ್, ಕ್ಯಾತಘಟ್ಟದ ಕೃಷ್ಣ ಮತ್ತು ವೆಂಕಟೇಶ್ ಬಂಧಿತರು. ಇದರಿಂದ ಜಿಲ್ಲೆಯ 14 ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ. ₹47 ಲಕ್ಷ ಮೌಲ್ಯದ 670 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು 170 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದೇವೆ. ಆರೋಪಿಗಳು ದೋಚುತ್ತಿದ್ದ ಒಡವೆಗಳನ್ನು ಬೆಂಗಳೂರು ಮತ್ತು ಮೈಸೂರಿನ ಜ್ಯುವೆಲರಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದರು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಈ ಆರೋಪಿಗಳು ಒಂದೇ ಜಾತಿಗೆ ಸೇರಿದ್ದು, ಒಂದೇ ಕಸುಬಿನವರಾಗಿದ್ದರು. 52ರಿಂದ 54 ವರ್ಷದ ಇವರು ಹಂದಿ ಮೇಯಿಸಿಕೊಂಡು ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. 30 ವರ್ಷಗಳಿಂದ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದು, ಇವರ ವಿರುದ್ಧ ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ 40 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
‘ಮನೆಗಳ್ಳತನ ನಿಯಂತ್ರಣಕ್ಕೆ ಬೀಟ್ ವ್ಯವಸ್ಥೆ’
‘ಜಿಲ್ಲೆಯಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಳವಾಗಿದ್ದು ಬೀಗ ಹಾಕಿದ ಒಂಟಿ ಮನೆಗಳನ್ನೇ ಕಳ್ಳರು ಗುರಿಯಾಗಿಸಿಕೊಂಡು ಚಿನ್ನಾಭರಣ ದೋಚುತ್ತಿದ್ದಾರೆ. ಮನೆಗಳ್ಳತನಕ್ಕೆ ಕಡಿವಾಣ ಹಾಕಲು ಸಂಜೆ ಮತ್ತು ರಾತ್ರಿ ವೇಳೆ ಬೀಟ್ ವ್ಯವಸ್ಥೆಯನ್ನು ಚುರುಕುಗೊಳಿಸುತ್ತೇವೆ’ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು. ಸಾರ್ವಜನಿಕರು ಎರಡು ಮೂರು ದಿನ ಬೇರೆ ಊರುಗಳಿಗೆ ಹೋಗುವಾಗ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ಪೊಲೀಸರು ಆ ಭಾಗದಲ್ಲಿ ಹೆಚ್ಚು ನಿಗಾ ವಹಿಸುತ್ತಾರೆ. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.