ADVERTISEMENT

ಮಳವಳ್ಳಿ: ಅನುತ್ತೀರ್ಣರಾದವರು ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 15 ಮೇ 2025, 12:07 IST
Last Updated 15 ಮೇ 2025, 12:07 IST
ಮಳವಳ್ಳಿ ಪಟ್ಟಣದ ಬಾಯ್ಸ್ ಹೋಂ ಶಾಲಾ ಆವರಣದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ 'ಉಚಿತ ಸನಿವಾಸ ತರಬೇತಿ ಕಾರ್ಯಾಗಾರವನ್ನು' ತಾಲ್ಲೂಕು ಪಂಚಾಯಿತಿ ಇಒ ಎಚ್.ಜಿ.ಶ್ರೀನಿವಾಸ್ ಉದ್ಘಾಟಿಸಿದರು.
ಮಳವಳ್ಳಿ ಪಟ್ಟಣದ ಬಾಯ್ಸ್ ಹೋಂ ಶಾಲಾ ಆವರಣದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ 'ಉಚಿತ ಸನಿವಾಸ ತರಬೇತಿ ಕಾರ್ಯಾಗಾರವನ್ನು' ತಾಲ್ಲೂಕು ಪಂಚಾಯಿತಿ ಇಒ ಎಚ್.ಜಿ.ಶ್ರೀನಿವಾಸ್ ಉದ್ಘಾಟಿಸಿದರು.   

ಮಳವಳ್ಳಿ: ‘ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತ್ಮಸ್ಥೈರ್ಯದೊಂದಿಗೆ ಪರೀಕ್ಷೆ-2ಅನ್ನು ಎದುರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ಎಚ್.ಜಿ. ಶ್ರೀನಿವಾಸ್ ಸಲಹೆ ನೀಡಿದರು.

ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪಟ್ಟಣದ ಬಾಯ್ಸ್ ಹೋಂ ಶಾಲಾ ಆವರಣದಲ್ಲಿ ಗುರುವಾರ ಎಸ್ಎಸ್ಎಲ್‌ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ 'ಉಚಿತ ಸನಿವಾಸ ತರಬೇತಿ ಕಾರ್ಯಾಗಾರವನ್ನು'  ಉದ್ಘಾಟಿಸಿ ಮಾತನಾಡಿದರು.

‘ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಎಲ್ಲವೂ ಮುಗಿದು ಹೋಯಿತು ಎಂಬ ನಿರಾಶೆಯ ಮನೋಭಾವವನ್ನು ತೊರೆದು ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿಸಿಕೊಂಡು ಛಲ ಹಾಗೂ ಕಠಿಣ ಪರಿಶ್ರಮದಿಂದ ಮರು ಯತ್ನ ನಡೆಸಿ ಉತ್ತೀರ್ಣರಾಗುವ ಮೂಲಕ ಪೋಷಕರು, ಶಿಕ್ಷಕರು ಹಾಗೂ ತಾಲ್ಲೂಕಿಗೆ ಹೆಸರು ಬರುವಂತೆ ಶ್ರಮವಹಿಸಬೇಕು. ಸಮಯ ಹಾಗೂ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮಗೂ ಪ್ರತಿಭೆ ಹಾಗೂ ಸಾಮಾರ್ಥ್ಯ ಇದೆ ಎನ್ನುವುದನ್ನು ಸಮಾಜಕ್ಕೆ ತೋರಿಸಬೇಕು’ ಎಂದು ಹೇಳಿದರು.

ADVERTISEMENT

ಶಿಕ್ಷಕರು ಮಾಡುವ ಪಾಠವನ್ನು ಅರ್ಥಮಾಡಿಕೊಂಡು ಉತ್ತೀರ್ಣಗೊಳ್ಳುತ್ತೇನೆ ಎಂಬ ಗುರಿಯನ್ನಿಟ್ಟುಕೊಂಡು ನಿಂದಿಸಿದವರಿಗೆ ತಾವು ಯಾರೆಂದು ತೋರಿಸಲು ಉತ್ತಮ ಅಂಕದೊಂದಿಗೆ ಪಾಸಾಗಬೇಕು. ಜೀವನದಲ್ಲಿ ಸಮಯ ಅಮೂಲ್ಯ. ಒಂದು ಸಾರಿ ವ್ಯರ್ಥ ಮಾಡಿದ ಸಮಯ ಮತ್ತೊಮ್ಮೆ ಬರುವುದಿಲ್ಲ ಎಂಬುವುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡು ಮೊಬೈಲ್‌ಗಳಿಂದ ದೂರವಿದ್ದು, ಓದಿನ ಕಡೆಯ ಗಮನ ಹರಿಸಬೇಕು’ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ ಮಾತನಾಡಿ, ‘ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಗುಣಾತ್ಮಕ ಫಲಿತಾಂತ ಬಂದಿದ್ದರೂ 938 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಬೇಸರ ತಂದಿದೆ. ಫಲಿತಾಂತ ಬಂದ ಮರು ದಿನವೇ ಆಯಾ ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಕ್ರಮ ವಹಿಸಲಾಗಿದೆ. ಶಾಸಕರ ಸಹಕಾರ ಹಾಗೂ ಮಾರ್ಗದರ್ಶನದಂತೆ ಪಟ್ಟಣ ಸೇರಿದಂತೆ ತಾಲ್ಲೂಕಿನ 5 ಕೇಂದ್ರಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸನಿವಾಸ ವಿಶೇಷ ತರಬೇತಿ ಕಾರ್ಯಾಗಾರವನ್ನು ಮೇ 24ರವರೆಗೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ. ಶ್ರೀನಿವಾಸ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಹದೇವ್, ಪ್ರೌಢಶಾಲಾ ಶಾಲೆಗಳ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪುಟ್ಟರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಗುರುಸ್ವಾಮಿ, ಸಂಯೋಜನಾಧಿಕಾರಿ ದಯಾನಂದ್ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.