ADVERTISEMENT

ಮಂಡ್ಯ: ಮೂವರಿಗೆ ‘ಕಪ್ಪು ಶಿಲೀಂದ್ರ’ ದೃಢ, ಬಾರದ ಔಷಧಿ

ತುರ್ತು ಶಸ್ತ್ರಚಿಕಿತ್ಸೆಯ ಅವಶ್ಯಕತೆ, ನಿಗದಿತ ಲಸಿಕೆಗಾಗಿ ಕಾಯುತ್ತಿರುವ ವೈದ್ಯರು

ಎಂ.ಎನ್.ಯೋಗೇಶ್‌
Published 25 ಮೇ 2021, 19:30 IST
Last Updated 25 ಮೇ 2021, 19:30 IST
ಕಪ್ಪು ಶಿಲೀಂದ್ರ ಲಕ್ಷಣ (ಸಾಂದರ್ಭಿಕ ಚಿತ್ರ)
ಕಪ್ಪು ಶಿಲೀಂದ್ರ ಲಕ್ಷಣ (ಸಾಂದರ್ಭಿಕ ಚಿತ್ರ)   

ಮಂಡ್ಯ: ಜಿಲ್ಲೆಯಲ್ಲಿ ಮೂವರಿಗೆ ಕಪ್ಪು ಶಿಲೀಂದ್ರ ಸೋಂಕು ದೃಢಪಟ್ಟಿದ್ದು ಮಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೆ ಚಿಕಿತ್ಸೆ ನೀಡಲು ನಿಗದಿತ ಔಷಧಿ ಬಾರದ ಕಾರಣ ರೋಗಿಗಳ ಆರೋಗ್ಯ ಸ್ಥಿತಿ ಹದಗೆಡುತ್ತಿದೆ.

ಕಪ್ಪು ಶಿಲೀಂದ್ರ ಲಕ್ಷಣ ಕಂಡುಬಂದಿದ್ದ ರೋಗಿಗಳ ಪರೀಕ್ಷೆ ಕಳೆದ 10 ದಿನಗಳಿಂದಲೂ ನಡೆಯುತ್ತಿತ್ತು. ಮೂವರೂ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದರು. ಆದರೆ ಕಣ್ಣು, ಮೂಗಿನ ಭಾಗದಲ್ಲಿ ಉರಿಯೂತ ಕಾಣಿಸಿಕೊಂಡ ನಂತರ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಕಪ್ಪು ಶಿಲೀಂದ್ರ ಸೋಂಕಿನ ಶಂಕೆಯ ಹಿನ್ನೆಲೆಯಲ್ಲಿ ವೈದ್ಯರು ಒಂದು ವಾರ ತಪಾಸಣೆ ನಡೆಸಿದರು. ಸಿ.ಟಿ ಸ್ಕ್ಯಾನ್‌ , ಎಂಆರ್‌ಐ ವರದಿ ಅಧ್ಯಯನ ನಡೆಸಿದ ವೈದ್ಯರು ಕಪ್ಪು ಶಿಲೀಂದ್ರ ಸೋಂಕು ದೃಢಪಡಿಸಿದ್ದಾರೆ.

15 ದಿನಗಳ ಹಿಂದೆಯೇ ವ್ಯಕ್ತಿಯೊಬ್ಬರಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಅವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಯಿತು. ಆದರೆ ಅವರು ಮೈಸೂರು ಕೆ.ಆರ್‌.ಆಸ್ಪತ್ರೆಗೆ ತೆರಳುವುದಾಗಿ ತಿಳಿಸಿದರು. ಹೀಗಾಗಿ ಅವರ ಪರೀಕ್ಷೆಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ನಂತರ ಬಂದ ಮೂವರನ್ನೂ ಸಮಗ್ರ ತಪಾಸಣೆ ಒಳಪಡಿಸಲಾಯಿತು ಎಂದು ವೈದ್ಯರು ತಿಳಿಸಿದರು.

ADVERTISEMENT

ಬಾರದ ಔಷಧಿ: ಕಪ್ಪು ಶಿಲೀಂದ್ರ ರೋಗಕ್ಕೆ ಆಂಪೊಟೆರಿಸನ್‌–ಬಿ ಔಷಧಿಯನ್ನು ನಿಗದಿಗೊಳಿಸಲಾಗಿದೆ. ಆ ನಿಗದಿತ ಔಷಧಿ ಇಡೀ ರಾಜ್ಯದಲ್ಲಿ ಕೊರತೆ ಉಂಟಾಗಿದ್ದು ಇಲ್ಲಿಯವರೆಗೂ ಔಷಧಿ ಬಂದಿಲ್ಲ. ಸೋಂಕು ಪತ್ತೆಯಾಗಿ ಐದು ದಿನ ಕಳೆದಿದ್ದರೂ ಇಲ್ಲಿವರೆಗೆ ಮೂವರೂ ರೋಗಿಗಳಿಗೆ ನಿಗದಿತ ಔಷಧಿ ನೀಡಲು ಸಾಧ್ಯವಾಗಿಲ್ಲ. ಆತಂಕ ಸ್ಥಿತಿಯಲ್ಲಿರುವ ರೋಗಿಗಳು ಔಷಧಿಗಾಗಿ ಕಾಯುತ್ತಿದ್ದಾರೆ.

‘ಸದ್ಯಕ್ಕೆ ಮೂವರಿಗೂ ರೋಗನಿರೋಧಕ ಔಷಧಿ ನೀಡಲಾಗುತ್ತಿದೆ. ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 20 ವಯಲ್‌ ಆಂಪೊಟೆರಿಸನ್‌–ಬಿ ಔಷಧಿ ಪೂರೈಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಬುಧವಾರ ಔಷಧಿ ಬರುವ ನಿರೀಕ್ಷೆ ಇದೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ತಿಳಿಸಿದರು.

ರೋಗಿಗಳ ಸ್ಥಿತಿ: ಮೂವರೂ ರೋಗಿಗಳು ಹಿರಿಯ ನಾಗರಿಕರಾಗಿದ್ದು ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿಲ್ಲ. ಒಬ್ಬರು 68 ವರ್ಷದ ವ್ಯಕ್ತಿ, ಇನ್ನೊಬ್ಬರು 63 ವರ್ಷದ ಮಹಿಳೆ, ಮತ್ತೊಬ್ಬರು 61 ವರ್ಷದ ವ್ಯಕ್ತಿ ಕಪ್ಪು ಶಿಲೀಂದ್ರ ಸೋಂಕಿನಿಂದ ನರಳುತ್ತಿದ್ದಾರೆ. ಸೋಂಕು ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ. ಆದರೆ ಔಷಧಿ ಕೊರತೆ ಹಾಗೂ ರೋಗಿಗಳು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕಾರಣ ಶಸ್ತ್ರಚಿಕಿತ್ಸೆ ನೆರವೇರಿಸಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ತಿಳಿಸಿದರು.

‘ಇಬ್ಬರ ಆರೋಗ್ಯ ಸ್ಥಿರವಾಗಿದೆ, ಆದರೆ 68 ವರ್ಷದ ವ್ಯಕ್ತಿಯೊಬ್ಬರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಅವಶ್ಯಕತೆ ಇತ್ತು. ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕಡೇ ಗಳಿಗೆಯಲ್ಲಿ ರೋಗಿಯ ಮಗ ಅನುಮತಿ ನೀಡಲಿಲ್ಲ. ವಯೋ ಸಹಜ ಕಾಯಿಲೆಗಳಿರುವ ಕಾರಣ ಶಸ್ತ್ರಚಿಕಿತ್ಸೆಗೆ ಅವರ ಮಗ ನಿರಾಕರಿಸಿದ್ದಾರೆ’ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದರು.

ಕೋವಿಡ್‌ನಿಂದ ಮುಕ್ತರಾದವರಿಗೆ ಕಪ್ಪು ಶಿಲೀಂದ್ರ ಕಾಣಿಸಿಕೊಳ್ಳುತ್ತಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಗುಣಮುಖರಾಗಿ ಮನೆಗೆ ತೆರಳುತ್ತಿರುವ ರೋಗಿಗಳಿಗೆ ಈ ಸೋಂಕಿನ ಬಗ್ಗೆ ಎಚ್ಚರಿಕೆಯಿಂದರಲು ಸೂಚನೆ ನೀಡಲಾಗುತ್ತಿದೆ. ಸೋಂಕು ಹೆಚ್ಚಾದರೆ ಅವರಿಗೆ ಪ್ರತ್ಯೇಕ ಆಸ್ಪತ್ರೆ ನಿಗದಿಗೊಳಿಸುವ ಚಿಂತನೆ ಜಿಲ್ಲಾಡಳಿತದ ಮುಂದಿದೆ.

6 ಹಾಸಿಗೆ ಮೀಸಲು
ಕಪ್ಪು ಶಿಲೀಂದ್ರ ರೋಗಿಗಳಿಗಾಗಿ ಮಿಮ್ಸ್‌ ಆಸ್ಪತ್ರೆಯಲ್ಲಿ ಸದ್ಯಕ್ಕೆ 6 ಹಾಸಿಗೆಗಳ ವಾರ್ಡ್‌ ಮೀಸಲಿಡಲಾಗಿದೆ. ಅಲ್ಲಿ ಈಗ ಮೂವರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರು ಹೆಚ್ಚಾದರೆ ವಾರ್ಡ್‌ ವಿಸ್ತರಣೆ ಮಾಡುವ ಚಿಂತನೆ ವೈದ್ಯರಲ್ಲಿದೆ.

‘ಪ್ರತ್ಯೇಕ ವಾರ್ಡ್‌ನಲ್ಲಿ ಆಮ್ಲಜನಕ ಹಾಸಿಗೆ ಸೌಲಭ್ಯ ಒದಗಿಸಲಾಗಿದೆ. ಲಕ್ಷಣ ಕಂಡುಬಂದ ಎಲ್ಲಾ ರೋಗಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಡಾ.ಎಂ.ಆರ್‌.ಹರೀಶ್‌ ತಿಳಿಸಿದರು.

***

ಆಂಪೊಟೆರಿಸನ್‌–ಬಿ ಔಷಧಿಯನ್ನು ಅಪರೂಪಕ್ಕಷ್ಟೇ ಬಳಸಲಾಗುತ್ತಿತ್ತು. ಈಗ ತುರ್ತು ಬೇಡಿಕೆ ಇರುವ ಕಾರಣ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ.
–ಡಾ.ಎಚ್‌.ಪಿ.ಮಂಚೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.