ADVERTISEMENT

‘ಸ್ವಾತಂತ್ರ್ಯೋತ್ಸವದಲ್ಲಿ ನೆಹರೂ, ಟಿಪ್ಪು ನಿರ್ಲಕ್ಷ್ಯ’

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 16:34 IST
Last Updated 15 ಆಗಸ್ಟ್ 2022, 16:34 IST
ಶ್ರೀರಂಗಪಟ್ಟಣದಲ್ಲಿ ತಾಲ್ಲೂಕು ಆಡಳಿತ ಸೋಮವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಧ್ವಜ ವಂದನೆ ಸ್ವೀಕರಿಸಿದರು. ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ, ಡಿವೈಎಸ್ಪಿ ಸಂದೇಶ್‌ಕುಮಾರ್‌ ಇದ್ದರು
ಶ್ರೀರಂಗಪಟ್ಟಣದಲ್ಲಿ ತಾಲ್ಲೂಕು ಆಡಳಿತ ಸೋಮವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಧ್ವಜ ವಂದನೆ ಸ್ವೀಕರಿಸಿದರು. ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ, ಡಿವೈಎಸ್ಪಿ ಸಂದೇಶ್‌ಕುಮಾರ್‌ ಇದ್ದರು   

ಶ್ರೀರಂಗಪಟ್ಟಣ: ‘ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜವಾಹರಲಾಲ್‌ ನೆಹರೂ ಮತ್ತು ಟಿಪ್ಪು ಸುಲ್ತಾನ್‌ ಅವರಂಥ ಮಹನೀಯರನ್ನು ಸರ್ಕಾರಗಳು ಕಡೆಸುವ ಮೂಲಕ ಯುವ ಪೀಳಿಗೆಗೆ ತಪ್ಪು ಸಂದೇಶ ನೀಡುತ್ತಿವೆ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಬಿಗಿ, ಭದ್ರತೆಯ ನಡುವೆ ಅಧಿಕಾರ ನಡೆಸುವವರಿಗೆ ಸ್ವಾತಂತ್ರ್ಯ ಚಳವಳಿ ಮತ್ತು ಹೋರಾಟಗಾರರ ಬಗ್ಗೆ ಗೌರವ ಇಲ್ಲವೆಂದರೆ ಹೇಗೆ? ಎಂದರು.

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಭವಿಷ್ಯದ ಭಾರತವನ್ನು ಸದೃಢಗೊಳಿಸಬೇಕು. ದೇಶಪ್ರೇಮ, ಭಾವೈಕ್ಯ, ಸಹೋದರತ್ವ ಗುಣವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು.

ADVERTISEMENT

ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಪೊಲೀಸರು, ಸೆಸ್ಕ್‌ ಇಲಾಖೆ ನೌಕರರು ಹಾಗೂ ಆಶಾ ಕಾರ್ಯಕರ್ತೆಯರು ಪಥ ಸಂಚಲನ ನಡೆಸಿದರು. ದೇಶ ಭಕ್ತಿ ಬಿಂಬಿಸುವ ಕಾರ್ಯಕ್ರಮಗಳ ಜತೆಗೆ ಪಂಜಾಬಿ, ಸೂರತ್‌, ಕರ್ನಾಟಕ, ಕೇರಳ ರಾಜ್ಯಗಳ ಜಾನಪದ ನೃತ್ಯಗಳು ಗಮನ ಸೆಳೆದವು. ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ, ಬಿಇಒ ಎಂ.ಆರ್‌.ಅನಂತರಾಜು, ಪುರಸಭೆ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ಕೃಷ್ಣಪ್ಪ, ಡಿವೈಎಸ್ಪಿ ಸಂದೇಶಕುಮಾರ್‌, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಜಿ.ಬಿಂದು ಇದ್ದರು.

ಪಟ್ಟಣದ ಐತಿಹಾಸಿಕ ಬತೇರಿಯಲ್ಲಿ ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ ಧ್ವಜಾರೋಹಣ ನೆರವೇರಿಸಿದರು. ಸಹಸ್ರಾರು ಮಂದಿಯ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದ್ದು, ಆ ಮಹನೀಯರನ್ನು ಸ್ಮರಿಸಬೇಕು ಎಂದರು.

ಪುರಸಭೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಪಿ.ನಿರ್ಮಲಾ ಧ್ವಜಾರೋಹಣ ನೆರವೇರಿಸಿದರು.

ತಾ.ಪಂ ಕಚೇರಿ: ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಸಂಜೀವಪ್ಪ ಧ್ವಜಾರೋಹಣ ಮಾಡಿದರು. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಜಿ.ಬಿಂದು, ನರೇಗಾ ಯೋಜನೆಯ ಮಾಹಿತಿ ಶಿಕ್ಷಣ ಸಂವಹನ ಸಂಯೋಜಕಿ ಪಿ.ಸುಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.