
ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಸೋಮವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಯಿತು. ಇಲ್ಲಿನ ವಾಟರ್ ಗೇಟ್ ಸಮೀಪ, ಟಿಪ್ಪು ಮೃತದೇಹ ದೊರೆತ ಸ್ಥಳದಲ್ಲಿರುವ ಸ್ಮಾರಕಕ್ಕೆ ಪ್ರಗತಿಪರ ಸಂಘಟನೆಗಳ ಮುಖಂಡರು ಪುಷ್ಪ ನಮನ ಸಲ್ಲಿಸಿದರು.
ಟಿಪ್ಪು ಸುಲ್ತಾನ್ ಪರ ಘೋಷಣೆ ಕೂಗಿದರು. ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ಹೆಚ್ಚು ಜನರು ಗುಂಪುಗೂಡಬಾರದು ಎಂದು ಪೊಲೀಸರು ಸಂಘಟಕರಿಗೆ ತಿಳಿಸಿದರು. ಸ್ಮಾರಕದ ಸುತ್ತ, ಟಿಪ್ಪು ಸಮಾಧಿ ಸ್ಥಳವಾದ ಗುಂಬಸ್ ಬಳಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಪ್ರಜ್ಞಾವಂತರ ವೇದಿಕೆ ಸಂಚಾಲಕ ಸಿ.ಎಸ್. ವೆಂಕಟೇಶ್ ಮಾತನಾಡಿ, ‘ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ನಿಷೇಧಿಸಿರುವುದು ಸರಿಯಲ್ಲ. ನಾಡಿನ ರಕ್ಷಣೆಗಾಗಿ ತನ್ನ ಮಕ್ಕಳನ್ನು ಒತ್ತೆ ಇಟ್ಟ, ಪ್ರಾಣವನ್ನೇ ತ್ಯಾಗ ಮಾಡಿದ ವೀರನ ಜನ್ಮ ದಿನಾಚರಣೆಯ ದಿನ ನಿಷೇಧಾಜ್ಞೆ ಜಾರಿ ಮಾಡಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.
ಬಳಿಕ ಟಿಪ್ಪು ಸಮಾಧಿ ಸ್ಥಳ ಗುಂಬಸ್‌ಗೆ ತೆರಳಿದ ಪ್ರಗತಿಪರ ಸಂಘಟನೆಗಳ ಮುಖಂಡರು ಟಿಪ್ಪು ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಗಂಜಾಂನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಡಿವೈಎಫ್‌ಯ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಮುನೀರ್ ಕಾಟಿಪಳ್ಳಿ, ‘ಮುಸ್ಲಿಂ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ಟಿಪ್ಪು ಸಾರ್ವಜನಿಕವಾಗಿ ಟಿಪ್ಪು ಜಯಂತಿ ಆಚರಣೆ ನಿಷೇಧಿಸಲಾಗಿದೆ. ಮೇಲ್ವರ್ಗಕ್ಕೆ ಸೇರಿದ ನಾಯಕನಾಗಿದ್ದರೆ ಹೀಗೆ ಕಡೆಗಣಿಸುತ್ತಿರಲಿಲ್ಲ. ಟಿಪ್ಪು ಒಂದು ಧರ್ಮಕ್ಕೆ ಸೀಮಿತವಾದ ರಾಜನಲ್ಲ. ಸರ್ವ ಜನಾಂಗದ ಹಿತಚಿಂತಕ’ ಎಂದು ಹೇಳಿದರು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ‘ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ಮುಕ್ತ ಅವಕಾಶ ನೀಡಬೇಕು. ಟಿಪ್ಪು ಸಾಧನೆಗಳನ್ನು ಜನರಿಗೆ ತಿಳಿಸಬೇಕಾದ ಸರ್ಕಾರ ಒತ್ತಡಕ್ಕೆ ಮಣಿದು ನಿಷೇಧಾಜ್ಞೆ ಜಾರಿ ಮಾಡಿರುವುದು ಖಂಡನೀಯ’ ಎಂದರು.
ಮುಸ್ಲಿಂ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅಪ್ಸರ್ ಪಾಷ ಟಿಪ್ಪು ಸಾಧನೆ ಕುರಿತು ಸ್ವರಚಿತ ಕವನ ವಾಚಿಸಿದರು.
ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಕಾರ್ಯದರ್ಶಿ ಸುಶೀಲಾ, ಸಿಐಟಿಯುವ ಸಂಘಟನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ. ಕುಮಾರಿ, ಕರ್ನಾಟಕ ಪ್ರಾಂತ ರೈತ ಸಂಘಟನೆಯ ಜಿಲ್ಲಾ ಮುಖಂಡರಾದ ಎನ್.ಎಲ್. ಭರತ್‌ರಾಜ್, ಟಿ.ಎಲ್. ಕೃಷ್ಣೇಗೌಡ, ಮುಸ್ಲಿಂ ಸೌಹಾರ್ದ ಒಕ್ಕೂಟದ ಗೌರವಾಧ್ಯಕ್ಷ ಪ್ರೊ. ಇಲ್ಯಾಸ್ ಅಹಮದ್‌ಖಾನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸುಕ್ಕೂರ್, ಖಜಾಂಚಿ ಅಯೂಬ್ ಷರೀಫ್, ನಿರ್ದೇಶಕರಾದ ಆಫ್ತಾಬ್ ಅಹಮದ್, ಅರ್ಬಾಜ್‌ಖಾನ್, ಬಾಬು, ಕನ್ನಡಪರ ಹೋರಾಟಗಾರ್ತಿ ಪ್ರಿಯಾ ರಮೇಶ್, ಸಿಂಧುವಳ್ಳಿ ಅಕ್ಬರ್, ಎಸ್.ಎಂ. ಶಿವಕುಮಾರ್ ಪಾಲ್ಗೊಂಡಿದ್ದರು.
ಜಯಂತಿ ಆಚರಣೆಗೆ ನಿಷೇಧ ಸರಿಯಲ್ಲ | ಟಿಪ್ಪು ಸಾಧನೆ ಜನರಿಗೆ ತಿಳಿಯಬೇಕಿದೆ | ಟಿಪ್ಪು ಬಗ್ಗೆ ಸ್ವರಚಿತ ಕವನ ವಾಚನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.