ಸಂತೇಬಾಚಹಳ್ಳಿ: ಎರಡು ಎಕರೆ ಟೊಮೊಟೊ ಬೆಳೆಗೆ ರಾತ್ರಿ ವೇಳೆ ದುಷ್ಕರ್ಮಿಗಳು ಕಳೆನಾಶಕ ಸಿಂಪಡಿಸಿರುವ ಘಟನೆ ಕೆ.ಆರ್. ಪೇಟೆ ತಾಲ್ಲೂಕಿನ ಚೋಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಂತೇಬಾಚಹಳ್ಳಿ ಹೋಬಳಿಯ ಚೋಟ್ಟನಹಳ್ಳಿ ಗ್ರಾಮದ ಸರ್ವೆ ನಂಬರ್ 44ರಲ್ಲಿ ಎರಡು ಎಕರೆಯಲ್ಲಿ ರೈತ ಶರತ್ ಎಂಬುವರು ಬೆಳೆದಿರುವ ಟೊಮೆಟೊ ಬೆಳೆಗೆ ಕಳೆನಾಶಕ ಸಿಂಪಡಿಸಿದ್ದಾರೆ.
‘2 ಎಕರೆಗೆ ₹ 2.5 ಲಕ್ಷ ಹಣ ಖರ್ಚು ಮಾಡಿ ಟೊಮೊಟೊ ಬೆಳೆ ಬೆಳೆದಿದ್ದೆ. ಇನ್ನೇನು ಬೆಳೆಯಿಂದ ಆದಾಯ ಗಳಿಸಬೇಕಿತ್ತು. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಗುರುವಾರ ರಾತ್ರಿ ಯಾರೋ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ’ ಎಂದು ರೈತ ಶರತ್ ಅಳಲು ತೋಡಿಕೊಂಡಿದ್ದಾರೆ.
‘ಪೊಲೀಸ್ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ನ್ಯಾಯ ದೊರಕಿಸಿ ಕೊಡಬೇಕು. ಕೃಷಿ ಸಚಿವರು ಸ್ಪಂದಿಸಿ, ಸೂಕ್ತ ಪರಿಹಾರ ಕೊಡಿಸಬೇಕು. ಬೇರೆ ಯಾವುದೇ ರೈತರಿಗೂ ಮುಂದೆ ಇಂತಹ ಅನ್ಯಾಯ ಯಾರಿಂದಲೂ ಆಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ರೈತ ಮನವಿ ಮಾಡಿದ್ದಾರೆ.
ರಾಮನಕೊಪ್ಪಲು ಗ್ರಾ.ಪಂ. ಸದಸ್ಯ ಮಂಜು, ಗಣೇಶ್, ಶಾಂತಕುಮಾರ್, ಕುಮಾರ್, ಪ್ರಮೋದ್, ಹರೀಶ್, ಮಂಜೇಶ್ ಇನ್ನಿತರರು ರೈತನ ಜಮೀನಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.