
ಮಂಡ್ಯ: ‘ಸಕ್ಕರೆ ನಾಡು’ ಮೊದಲಿನಿಂದಲೂ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2024–2029ರಡಿ ಜಿಲ್ಲೆಯ ಪ್ರವಾಸಿ ತಾಣಗಳ ಸಂಖ್ಯೆ 106ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಒಳಗೊಂಡಿರುವ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಮೊದಲಿಗೆ 34 ತಾಣಗಳು ಪ್ರವಾಸೋದ್ಯಮ ಇಲಾಖೆಯ ಪಟ್ಟಿಯಲ್ಲಿದ್ದವು. ಈಗ ಹೊಸದಾಗಿ 72 ತಾಣಗಳು ಸೇರ್ಪಡೆಯಾಗಿವೆ. ಮಧ್ಯ ಏಷ್ಯಾದ ಮೊದಲ ಭೂಗತ ನೀರಾವರಿ ಸುರಂಗ ಎನಿಸಿರುವ ‘ಹುಲಿಕೆರೆ ಟನಲ್’, ಕೆಆರ್‌ಎಸ್ ಅಣೆಕಟ್ಟೆಯ ಹಿನ್ನೀರಿನಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯ, ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮ ಸ್ಥಳಕ್ಕೆ ಪ್ರವಾಸಿ ತಾಣಗಳ ಮಾನ್ಯತೆ ಸಿಕ್ಕಿದೆ.
ಬೆಳಗಾವಿ (100), ಚಿಕ್ಕಬಳ್ಳಾಪುರ (95), ಉತ್ತರಕನ್ನಡ (85), ಶಿವಮೊಗ್ಗ (64) ಈ ಜಿಲ್ಲೆಗಳು ಮೊದಲ 5 ಸ್ಥಾನಗಳಲ್ಲಿವೆ. ಪ್ರವಾಸೋದ್ಯಮಕ್ಕೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಮೈಸೂರು (13) ಮತ್ತು ಚಾಮರಾಜನಗರ (5) ಕಡಿಮೆ ತಾಣಗಳನ್ನು ಹೊಂದಿರುವುದು ಆಶ್ಚರ್ಯಕರ ಸಂಗತಿಯಾಗಿದೆ.
ಇದಕ್ಕೆ ಕಾರಣ ಪ್ರವಾಸಿ ತಾಣಗಳ ಒಟ್ಟು ಪಟ್ಟಿ ಕಳುಹಿಸುವಾಗ, ಈ ಎರಡು ಜಿಲ್ಲೆಗಳಿಂದ ಸೇರ್ಪಡೆಯಾಗಬೇಕಿರುವ ಹೊಸ ತಾಣಗಳ ಹೆಸರನ್ನು ಮಾತ್ರ ಇಲಾಖೆಗೆ ಕಳುಹಿಸಲಾಗಿತ್ತು. ಹೀಗಾಗಿ ಒಟ್ಟು ತಾಣಗಳ ಸಂಖ್ಯೆಯಲ್ಲಿ ಕಡಿಮೆ ಸಂಖ್ಯೆ ನಮೂದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಮಂಡ್ಯ ಜಿಲ್ಲೆಯ ಮಂಡ್ಯ ತಾಲ್ಲೂಕು–12, ಮಳವಳ್ಳಿ–11, ಮದ್ದೂರು– 18, ಶ್ರೀರಂಗಪಟ್ಟಣ– 24, ಪಾಂಡವಪುರ– 13, ನಾಗಮಂಗಲ–10 ಹಾಗೂ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 18 ಪ್ರವಾಸಿ ತಾಣಗಳು ಪ್ರವಾಸೋದ್ಯಮ ಇಲಾಖೆ ಹೊಸ ನೀತಿಯಡಿ ಮಾನ್ಯತೆ ಪಡೆದಿವೆ.
ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಖ್ಯಾತಿ ಮಂಡ್ಯ ಜಿಲ್ಲೆಗೆ ಸಿಕ್ಕಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಯನ್ನು ಅನುದಾನ ಲಭ್ಯತೆ ಮೇರೆಗೆ ಅಭಿವೃದ್ಧಿಪಡಿಸಲಾಗುವುದುಎಚ್.ಬಿ. ರಾಘವೇಂದ್ರ ಉಪನಿರ್ದೇಶಕ ಪ್ರವಾಸೋದ್ಯಮ ಇಲಾಖೆ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.