ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಬೇಬಿ ಮಠ ಹಾಗೂ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಭಾನುವಾರ ಬಾಗಿನ ಅರ್ಪಿಸಿದರು.
ತುಂಬಿ ತುಳುಕುತ್ತಿರುವ ಜಲಾಶಯಕ್ಕೆ ಮಂಗಳ ವಾದ್ಯ ಮತ್ತು ವೇದ ಘೋಷಗಳ ನಡುವೆ ಬಾಗಿನವನ್ನು ಸಮರ್ಪಿಸಿದರು. ಬಿದಿರು ಮೊರ, ಬಳೆ, ವಸ್ತ್ರ, ಧಾನ್ಯ, ಮಂಗಳ ದ್ರವ್ಯಗಳಿಂದ ಬಾಗಿನವನ್ನು ಸಿದ್ಧಪಡಿಸಲಾಗಿತ್ತು. ಬಾಗಿನ ಸಲ್ಲಿಸಿದ ಬಳಿಕ ಜಲಾಶಯಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಕಾವೇರಿ ಮಾತೆಯ ಪ್ರತಿಮೆಗೆ ಸ್ವಾಮೀಜಿ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
‘ಈ ಬಾರಿ ಜೂನ್ ತಿಂಗಳಿನಲ್ಲೇ ಕೆಆರ್‌ಎಸ್ ಜಲಾಶಯ ಭರ್ತಿಯಾಗಿರುವುದು ಸಂತಸ ತಂದಿದೆ. ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ. ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಅಕ್ಟೋಬರ್ ಅಂತ್ಯದ ವರೆಗೆ ಮುಂಗಾರು ಮಳೆ ಸುರಿದರೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗೆ ನೀರಿನ ಬವಣೆ ತಪ್ಪಲಿದೆ. ಸಮೃದ್ಧವಾಗಿ ಮಳೆಯಾಗಿ ರೈತರು ಉತ್ತಮ ಬೆಳೆ ಬೆಳೆಯಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ’ ಎಂದು ಸ್ವಾಮೀಜಿ ತಿಳಿಸಿದರು.
‘ಕಾವೇರಿ ನದಿ ಮಲಿನ ಆಗುತ್ತಿದೆ ಎಂಬ ವರದಿಗಳು ಬೇಸರ ತರಿಸಿವೆ. ಕಾವೇರಿ ನದಿ ತಾಯಿಗೆ ಸಮಾನ. ಹಾಗಾಗಿ ನದಿ ಮಲಿನ ಆಗದಂತೆ ಪೂಜ್ಯ ಭಾವನೆಯಿಂದ ಕಾಣಬೇಕು. ಜೀವ ನದಿಯ ಪಾವಿತ್ರ್ಯತೆಯನ್ನು ಕಾಪಾಡಬೇಕು’ ಎಂದು ಸ್ವಾಮೀಜಿ ಹೇಳಿದರು.
ಚಂದ್ರವನ ಆಶ್ರಮದ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಕಾರ್ಯದರ್ಶಿ ಟಿ.ಪಿ. ಶಿವಕುಮಾರ್, ಮಲ್ಲೇಶ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.