ADVERTISEMENT

ಇಬ್ಬರು ಅತಿಥಿ ಉಪನ್ಯಾಸಕರ ಆತ್ಮಹತ್ಯೆ: ಖಿನ್ನತೆ ಕಾರಣ?

ಲಾಕ್‌ಡೌನ್‌ ಅವಧಿಯಲ್ಲಿ ಆರ್ಥಿಕ ಬಿಕ್ಕಟ್ಟು, ನೆರವಿಗೆ ಬರುವಂತೆ ಸರ್ಕಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 11:33 IST
Last Updated 12 ಜೂನ್ 2020, 11:33 IST
ಆತ್ಮಹತ್ಯೆ ಮಾಡಿಕೊಂಡ ಕೋಕಿಲಾ
ಆತ್ಮಹತ್ಯೆ ಮಾಡಿಕೊಂಡ ಕೋಕಿಲಾ   

ಮಂಡ್ಯ: ತಿಂಗಳ ಅಂತರದಲ್ಲಿ, ಒಂದೇ ಕಾಲೇಜಿನ ಇಬ್ಬರು ಅತಿಥಿ ಉಪನ್ಯಾಸಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಲಾಕ್‌ಡೌನ್‌ ಅವಧಿಯ ಮಾನಸಿಕ ಖಿನ್ನತೆಯೇ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮಳವಳ್ಳಿ ಸರ್ಕಾರಿ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕಿಯಾಗಿದ್ದ ಕೋಕಿಲಾ (35) ಮೇ 11ರಂದು ನೇಣಿಗೆ ಶರಣಾಗಿದ್ದರೆ, ಇತಿಹಾಸ ಉಪನ್ಯಾಸಕ ಸುರೇಶ್‌ (29) ಜೂನ್‌ 4ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಸಾಕಷ್ಟು ಅರ್ಹತೆ ಇದ್ದರೂ ಸರ್ಕಾರಿ ಉದ್ಯೋಗ ಸಿಕ್ಕಿಲ್ಲ ಎಂಬ ನೋವು ಅವರನ್ನು ಕಾಡುತಿತ್ತು. ಸರ್ಕಾರವು ವೇತನ ಬಿಡುಗಡೆ ಮಾಡದ ಕಾರಣ ಅವರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದರು’ ಎಂದೇ ಆಪ್ತ ವಲಯದಲ್ಲಿ ಹೇಳಲಾಗುತ್ತಿದೆ.

ADVERTISEMENT

‘ಇಬ್ಬರೂ ಮೂರು ವರ್ಷಗಳಿಂದ ನಮ್ಮ ಕಾಲೇಜಿನ ಭಾಗವೇ ಆಗಿದ್ದರು. ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್‌ ಪಾಠ ಮಾಡುತ್ತಿದ್ದರು’ ಎಂದು ಪ್ರಾಚಾರ್ಯ ಕೆ.ಟಿ.ವೆಂಕಟೇಶ್‌ ಹೇಳಿದರು.

ಖಿನ್ನತೆಯಿಂದ ಕೋಕಿಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಅಕ್ಕ ಭಾರತೀನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಸುರೇಶ್‌ ಅಸಹಜ ಸಾವಿನ ಕುರಿತ ಪ್ರಕರಣ ದಾಖಲಾಗಿದೆ.

ಸದಾ ಸರ್ಕಾರಿ ಕೆಲಸದ ಗುಂಗಿನಲ್ಲಿ ಇರುತ್ತಿದ್ದ ಸುರೇಶ್‌, ಮೊದಲಿನಿಂದಲೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

‘ಉದ್ಯೋಗ ಭದ್ರತೆ ಇಲ್ಲದ ಸಾವಿರಾರು ಅತಿಥಿ ಉಪನ್ಯಾಸಕರು ಮನೋರೋಗಿಗಳಾಗುತ್ತಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ನಿರುದ್ಯೋಗಿಗಳಾಗಿ, ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ಸರ್ಕಾರವು ಅತಿಥಿ ಉಪನ್ಯಾಸಕರ ನೆರವಿಗೆ ಧಾವಿಸಬೇಕು’ ಎಂದು ರಾಜ್ಯ ಶೈಕ್ಷಣಿಕ ದಿಕ್ಸೂಚಿ ಹಾಗೂ ಸುಧಾರಣಾ ಸಮಿತಿ ಅಧ್ಯಕ್ಷ ಸುಧಾಕರ ಹೊಸಳ್ಳಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.