ADVERTISEMENT

ಮಂಡ್ಯ | ‘ಗ್ಯಾರಂಟಿ’ಗೆ 2 ವರ್ಷ: ಮಹಿಳೆಯರಿಂದ 14 ಕೋಟಿ ‘ಶಕ್ತಿ’ ಟ್ರಿಪ್

ಮಂಡ್ಯ ವಿಭಾಗಕ್ಕೆ ನಿತ್ಯ ₹40 ಲಕ್ಷ ಹೆಚ್ಚುವರಿ ಆದಾಯ

ಸಿದ್ದು ಆರ್.ಜಿ.ಹಳ್ಳಿ
Published 21 ಜೂನ್ 2025, 4:35 IST
Last Updated 21 ಜೂನ್ 2025, 4:35 IST
‘ಶಕ್ತಿ’ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿರುವ ಮಹಿಳೆಯರು 
‘ಶಕ್ತಿ’ ಯೋಜನೆಯಡಿ ಉಚಿತ ಪ್ರಯಾಣ ಮಾಡುತ್ತಿರುವ ಮಹಿಳೆಯರು    

ಮಂಡ್ಯ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಗೆ ಎರಡು ವರ್ಷ ತುಂಬಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಡ್ಯ ವಿಭಾಗದಲ್ಲಿ 13.99 ಕೋಟಿ ಮಹಿಳೆಯರು ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ‘ಉಚಿತ ಪ್ರಯಾಣ’ ಮಾಡಿದ್ದಾರೆ. ಇದರ ಟಿಕೆಟ್‌ ಮೊತ್ತ ಬರೋಬ್ಬರಿ ₹370 ಕೋಟಿ.

ಕಾಂಗ್ರೆಸ್‌ ಸರ್ಕಾರ 2023ರ ಜೂನ್‌ 11ರಂದು ‘ಶಕ್ತಿ’ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿತು. ಈ ಯೋಜನೆಯಡಿ ಮಂಡ್ಯ ವಿಭಾಗದಲ್ಲಿ ಮೊದಲ ವರ್ಷ 7.01 ಕೋಟಿ ಮಹಿಳೆಯರು ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಿ, ₹177 ಕೋಟಿ ಆದಾಯ ನಿಗಮಕ್ಕೆ ಬಂದಿತು.

‘ಶಕ್ತಿ’ ಯೋಜನೆ ಜಾರಿಯಾಗುವ ಮೊದಲು ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 2.04 ಲಕ್ಷವಿದ್ದು, ಸರಾಸರಿ ಆದಾಯ ₹45.57 ಲಕ್ಷ ಇತ್ತು. ಶಕ್ತಿ ಯೋಜನೆ ಜಾರಿಯಾದ ನಂತರ ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 2.85 ಲಕ್ಷಕ್ಕೆ ಏರಿಕೆಯಾಗಿ, ಸರಾಸರಿ ಆದಾಯ ಕೂಡ ₹86.29 ಲಕ್ಷ ಮುಟ್ಟಿತು.

ADVERTISEMENT

ಈ ಯೋಜನೆಯಿಂದ ಮಂಡ್ಯ ವಿಭಾಗಕ್ಕೆ ಪ್ರತಿದಿನ ಸರಾಸರಿ 82 ಸಾವಿರ ಹೆಚ್ಚುವರಿ ಪ್ರಯಾಣಿಕರು ಸಾರಿಗೆ ಬಸ್‌ಗಳಲ್ಲಿ ಓಡಾಡಿದರು. ಇದರ ಪರಿಣಾಮ ನಿಗಮಕ್ಕೆ ಸಂದಾಯವಾಗುತ್ತಿದ್ದ ಆದಾಯ ಕೂಡ ₹40.72 ಲಕ್ಷ ಹೆಚ್ಚುವರಿಯಾಗಿ ದೊರಕಿದೆ.

ಮಂಡ್ಯ ವಿಭಾಗವು 6 ಬಸ್‌ ಘಟಕಗಳನ್ನು (ಡಿಪೊ) ಒಳಗೊಂಡಿದ್ದು, ಅದರಲ್ಲಿ ಮಂಡ್ಯ (₹94 ಕೋಟಿ), ಮದ್ದೂರು (₹71 ಕೋಟಿ) ಹಾಗೂ ಮಳವಳ್ಳಿ (₹63 ಕೋಟಿ) ಹೆಚ್ಚು ಆದಾಯ ತಂದುಕೊಟ್ಟ ಘಟಕಗಳು ಎನಿಸಿವೆ.

496 ಬಸ್‌ಗಳ ಕಾರ್ಯಾಚರಣೆ: ಮಂಡ್ಯ ವಿಭಾಗದಲ್ಲಿ ಪ್ರಸ್ತುತ 531 ಬಸ್‌ಗಳಿದ್ದು, ಅವುಗಳಲ್ಲಿ 496 ಬಸ್‌ಗಳು ನಿತ್ಯ 675 ಮಾರ್ಗಗಳಲ್ಲಿ ಒಟ್ಟು 1,82,622 ಕಿ.ಮೀ. ಕಾರ್ಯಾಚರಣೆ ಮಾಡುತ್ತಿವೆ. ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 18 ಬಸ್‌ ನಿಲ್ದಾಣಗಳಿವೆ. 1997 ಸಿಬ್ಬಂದಿಯು ಚಾಲಕ ಮತ್ತು ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬಸ್‌ ನಿಲ್ದಾಣ ಮೇಲ್ದರ್ಜೆಗೇರಿಸಲು ಪ್ರಸ್ತಾವ: ‘ಕೆ.ಆರ್‌.ಪೇಟೆ ಪಟ್ಟಣದ ಬಸ್‌ ನಿಲ್ದಾಣವು ಮಳೆಗಾಲದಲ್ಲಿ ಜಲಾವೃತವಾಗುತ್ತದೆ. ಈ ಕಾರಣದಿಂದ ₹16 ಕೋಟಿ ವೆಚ್ಚದಲ್ಲಿ ಮೇಲ್ದರ್ಜೇಗೇರಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಅದೇ ರೀತಿ ಮಂಡ್ಯ ಕೇಂದ್ರ ಬಸ್‌ ನಿಲ್ದಾಣವನ್ನು ₹45 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲು ಕೇಂದ್ರ ಕಚೇರಿಯನ್ನು ಕೋರಲಾಗಿದೆ. ಜೊತೆಗೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್‌.ಎಸ್‌. ಗ್ರಾಮದ ಬಳಿ ₹16 ಕೋಟಿ ವೆಚ್ಚದಲ್ಲಿ ನೂತನ ‘ಬಸ್‌ ಘಟಕ’ ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದು ಮಂಡ್ಯ ವಿಭಾಗೀಯ ಸಂಚಲನಾಧಿಕಾರಿ (ಡಿಟಿಒ) ಪರಮೇಶ್ವರಪ್ಪ ಮಾಹಿತಿ ನೀಡಿದರು.

‘45 ಹೊಸ ಬಸ್‌ಗಳಿಗೆ ಬೇಡಿಕೆ’
‘ಶಕ್ತಿ ಯೋಜನೆ ಜಾರಿಯಾದ ನಂತರ ಮಂಡ್ಯ ವಿಭಾಗಕ್ಕೆ 87 ಹೊಸ ಬಸ್‌ಗಳು ಸೇರ್ಪಡೆಯಾಗಿದ್ದು ಇನ್ನೂ 45 ಬಸ್‌ಗಳ ಬೇಡಿಕೆ ಇದೆ ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಂಡ್ಯ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಪಿ. ನಾಗರಾಜು ಮಾಹಿತಿ ನೀಡಿದರು. ಕೆ.ಆರ್‌. ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳುವಿನಲ್ಲಿ ₹1.25 ಕೋಟಿ ವೆಚ್ಚದಲ್ಲಿ ನೂತನ ಬಸ್‌ ನಿಲ್ದಾಣ ನಿರ್ಮಿಸಲಾಗಿದ್ದು ಜೂನ್‌ 24ಕ್ಕೆ ಉದ್ಘಾಟನೆಯಾಗಲಿದೆ. ಇದರಿಂದ ವಿಭಾಗದ ವ್ಯಾಪ್ತಿಯ ಬಸ್‌ ನಿಲ್ದಾಣಗಳ ಸಂಖ್ಯೆ 19ಕ್ಕೆ ಏರಿಕೆಯಾಗುತ್ತದೆ. ಲಭ್ಯವಿರುವ ಬಸ್‌ಗಳ ಮೂಲಕ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.