ADVERTISEMENT

ತಂತ್ರಜ್ಞಾನಲ್ಲಿ ಕನ್ನಡ ಭಾಷೆ ಬಳಸುವಂತಾಗಲಿ: ನಾಗತಿಹಳ್ಳಿ ಚಂದ್ರಶೇಖರ್‌

ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 4:34 IST
Last Updated 22 ಫೆಬ್ರುವರಿ 2021, 4:34 IST
ಮಂಡ್ಯ ನಗರದ ಸರ್‌ ಎಂ.ವಿ.ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಂಡ್ಯ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿದರು
ಮಂಡ್ಯ ನಗರದ ಸರ್‌ ಎಂ.ವಿ.ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಂಡ್ಯ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿದರು   

ಮಂಡ್ಯ: ಸಂಶೋಧನೆ, ವೈದ್ಯಕೀಯ, ತಂತ್ರಜ್ಞಾನದಲ್ಲಿ ಕನ್ನಡ ಭಾಷೆಯನ್ನು ಸರಳವಾಗಿ ಬಳಸುವಂತಾಗಬೇಕು. ಹೊಸ ಕಾಲಕ್ಕೆ ಕನ್ನಡ ಕಟ್ಟುವ ಕೆಲಸವಾಗಬೇಕು ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಮಂಡ್ಯ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.

ವಿಶ್ವಮಟ್ಟದ ಚಿಂತನೆಗಳು, ಗ್ರಹಿಕೆ, ಪ್ರಪಂಚದ ಶ್ರೇಷ್ಠ ಅನುಭವಗಳು ಕನ್ನಡದಲ್ಲಿ ನಮಗೆ ಸಿಗಬೇಕು. ಮನುಷ್ಯ ಕುಲ ಕಟ್ಟುವ ಸಾಹಿತ್ಯ, ಚಿತ್ರಕಲೆ, ಸಂಗೀತ, ವಿಜ್ಞಾನ, ಕ್ರೀಡೆ ಎಲ್ಲ ಧಾತುಗಳು ಕನ್ನಡದಲ್ಲಿ ದೊರತರೆ ಆಕರ್ಷಕವಾಗಿರುತ್ತದೆ. ವಿಶ್ವದ ಸ್ಪರ್ಧೆಯಲ್ಲಿ ಕನ್ನಡಿಗರು ಎದ್ದು ನಿಲ್ಲುತ್ತಾರೆ. ಆಗ ಮಾತ್ರ ಮುಕ್ತ ಮನಸ್ಸಿನಿಂದ ಕನ್ನಡವನ್ನು ಆಹ್ವಾನಿಸಿ ಕೊಳ್ಳುತ್ತಾರೆ ಎಂದು ಹೇಳಿದರು.

ADVERTISEMENT

ಇಡೀ ಜಗತ್ತಿನಲ್ಲಿ ಕನ್ನಡ ತೆರೆದುಕೊಳ್ಳಬೇಕಾದರೆ ಕನ್ನಡಕ್ಕೆ ಮಡಿವಂತಿಕೆಯ ಬೇಲಿ ಬೇಡವಾಗಿದೆ. ದೇಶೀಯ ಹಾಗೂ ಜಾಗತಿಕ ನೆಲೆಗಟ್ಟಿನಲ್ಲಿ ಏಕಕಾಲದಲ್ಲಿ ಸ್ವೀಕರಿಸುವ, ಕನ್ನಡ ಕಟ್ಟುವ ಕೆಲಸವಾಗಬೇಕು. ಡಿಜಿಟಲೀಕರಣದ ಸಂದರ್ಭದಲ್ಲಿ ಪುಸ್ತಕ ಪ್ರಕಟಣೆ, ಓದುವವರ ಸಂಖ್ಯೆ ಹಾಗೂ ಪುಸ್ತಕಗಳು ಕಡಿಮೆಯಾಗುತ್ತಿವೆ. ದೃಶ್ಯ ಮಾಧ್ಯಮದ ಕಡೆ ಹೊರಳುತ್ತಿದ್ದಾರೆ. ಸಾಹಿತ್ಯದಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯಬೇಕು. ಕನ್ನಡ ಜಾತ್ರೆಗಳು ಹೆಚ್ಚಾಗಿ ನಡೆಯುವುದರಿಂದ ಹೊಸತನಕ್ಕೆ ಕನ್ನಡವನ್ನು ಕೊಂಡೊಯ್ಯುವ ಕೆಲಸಗಳು ಆಗಬೇಕು. ಸಮ್ಮೇಳನಗಳನ್ನು ಶಿಸ್ತಿನ ಕಡೆಗೆ ತರಬೇಕು ಎಂದರು.

ಕನ್ನಡ ಚಿತ್ರರಂಗದಲ್ಲಿ ಕನ್ನಡ ಕಲುಷಿತಗೊಂಡಿದೆ. ಚಿತ್ರ ಗೀತೆಗಳು, ಸಂಭಾಷಣೆಗಳು ಕಲುಷಿತಗೊಂಡು ವ್ಯವಹಾರಕ್ಕೆ ಬಳಕೆಯಾಗುತ್ತಿದೆ. ಇದು ಕನ್ನಡ ಭಾಷೆಯನ್ನು ಅಧೋಗತಿಗೆ ಕೊಂಡೊಯ್ಯುತ್ತದೆ. ಆದ್ದರಿಂದ ಇದನ್ನು ಸರಿಪಡಿಸುವ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಐಎಎಸ್‌ಗೆ ಬಡ್ತಿ ಹೊಂದಿದ ಅಧಿಕಾರಿಗಳನ್ನು ಅಭಿನಂದಿಸಲಾಯಿತು.

ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ, ಸಮ್ಮೇಳನಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.