ADVERTISEMENT

ಮಂಡ್ಯ ಜಿಲ್ಲಾಡಳಿತಕ್ಕೆ ಸವಾಲಾಗಿರುವ ಖಾಸಗಿ ಶಾಲೆ, ಕಾಲೇಜು ತೆರವು

ತಮಿಳು ಕಾಲೊನಿ ಬಡವರ ಶೆಡ್‌ ಸ್ಥಳಾಂತರಕ್ಕೆ ಸಿದ್ಧತೆ, ಪ್ರಭಾವಿಗಳ ಕಟ್ಟಡ ತೆರವುಗೊಳಿಸಲು ಮೀನಾಮೇಷ

ಎಂ.ಎನ್.ಯೋಗೇಶ್‌
Published 19 ಏಪ್ರಿಲ್ 2022, 19:30 IST
Last Updated 19 ಏಪ್ರಿಲ್ 2022, 19:30 IST
ಮಿಮ್ಸ್‌ ಆಸ್ಪತ್ರೆ ಕಟ್ಟಡಕ್ಕೆ ಹೊಂದಿಕೊಂಡಂತಿರುವ ತಮಿಳು ಕಾಲೊನಿಯ ನೋಟ
ಮಿಮ್ಸ್‌ ಆಸ್ಪತ್ರೆ ಕಟ್ಟಡಕ್ಕೆ ಹೊಂದಿಕೊಂಡಂತಿರುವ ತಮಿಳು ಕಾಲೊನಿಯ ನೋಟ   

ಮಂಡ್ಯ: ಮಿಮ್ಸ್‌ ಆಸ್ಪತ್ರೆಯ ಪಕ್ಕದಲ್ಲಿರುವ ತಮಿಳು ಕಾಲೊನಿ ತೆರವಿಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಆದರೆ, ಆಸ್ಪತ್ರೆ ಪಕ್ಕದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಖಾಸಗಿ ಶಾಲಾ, ಕಾಲೇಜು ಹಾಗೂ ಇತರ ಸಂಘ ಸಂಸ್ಥೆಗಳ ಕಚೇರಿ ಕಟ್ಟಡ ತೆರವುಗೊಳಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

ಯಾವುದೇ ಹಕ್ಕುಪತ್ರವಿಲ್ಲದೇ ಆಸ್ಪತ್ರೆ ಪಕ್ಕದಲ್ಲಿ ದಶಕದಿಂದಲೂ ಬದುಕುತ್ತಿದ್ದ ತಮಿಳು ನಿವಾಸಿಗಳ ತೆರವಿಗೆ ಹೈಕೋರ್ಟ್‌ ಆದೇಶ ನೀಡಿ 7 ವರ್ಷಗಳಾಗಿವೆ. ಬದಲಿ ವ್ಯವಸ್ಥೆಯ ನೆಪವೊಡ್ಡಿ ಜಿಲ್ಲಾಡಳಿತ ದಿನ ದೂಡುತ್ತಲೇ ಬಂದಿದೆ. ಕಾಲೊನಿ ನಿವಾಸಿಗಳಿಗಾಗಿ ಕೆರೆಯಂಗಳದಲ್ಲಿ ನಡೆಯುತ್ತಿರುವ ಮನೆ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು ಶೀಘ್ರ ನಿವಾಸಿಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಜಿಲ್ಲಾಡಳಿತ ಹೈಕೋರ್ಟ್‌ ಆದೇಶದ ಉಲ್ಲಂಘನೆಯ ತೂಗುಗತ್ತಿ ಎದುರಿಸಬೇಕಾಗುತ್ತದೆ.

ತಮಿಳು ಕಾಲೊನಿ ನಿವಾಸಿಗಳನ್ನು ಕೆರೆಯಂಗಳಕ್ಕೆ ಸ್ಥಳಾಂತರ ಮಾಡುವುದು ಜಿಲ್ಲಾಡಳಿತಕ್ಕೆ ಕಷ್ಟವಲ್ಲ, ಆದರೆ ಆಸ್ಪತ್ರೆ ಜಾಗವನ್ನು ಅತಿಕ್ರಮಿಸಿಕೊಂಡು ಶಾಲೆ, ನರ್ಸಿಂಗ್‌ ಕಾಲೇಜು, ಸಂಘಸಂಸ್ಥೆ ಕಟ್ಟಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವುದು ಕಡುಕಷ್ಟವಾಗಿದೆ. ಬಹುತೇಕ ಮಾಲೀಕರು ರಾಜಕೀಯ ಪ್ರಭಾವಿಗಳೇ ಆಗಿದ್ದು ಅವರ ಒತ್ತಡ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ADVERTISEMENT

‘ತಮಿಳು ಕಾಲೊನಿಗೆ ಹೊಂದಿಕೊಂಡಂತೆ ಕ್ಲಬ್‌ವೊಂದಕ್ಕೆ ಸೇರಿದ ಖಾಸಗಿ ಶಾಲೆ ನಡೆಯುತ್ತಿದೆ. ಬಿಜೆಪಿ ಮುಖಂಡರೊಬ್ಬರಿಗೆ ಸೇರಿದ ಕಟ್ಟಡದಲ್ಲಿ ನರ್ಸಿಂಗ್‌ ಕಾಲೇಜು, ಪ್ಯಾರಾ ಮೆಡಿಕಲ್‌ ತರಬೇತಿ ಸಂಸ್ಥೆ ನಡೆಯುತ್ತಿದೆ. ಕಾಲೊನಿ ಹಿಂಭಾಗದಲ್ಲಿ ಜೆಡಿಎಸ್‌ ಮುಖಂಡರೊಬ್ಬರಿಗೆ ಸೇರಿದ ಕಾಲೇಜು ನಡೆಯುತ್ತಿದೆ. ಇದರ ಜೊತೆಗೆ ಭಾರತೀಯ ವೈದ್ಯಕೀಯ ಸಂಘ ಸೇರಿದಂತೆ ಹಲವು ಕಚೇರಿಗಳಿವೆ, ಪ್ರಭಾವಿ ಮುಖಂಡರು ನಿವೇಶನ ಹೊಂದಿದ್ದಾರೆ. ತಮಿಳು ಕಾಲೊನಿಯ ಬಡ ನಿವಾಸಿಗಳನ್ನು ತೆರವುಗೊಳಿಸಲು ಮುಂದಾಗಿರುವ ಜಿಲ್ಲಾಡಳಿತ ಪ್ರಭಾವಿ ಮಾಲೀಕರನ್ನು ತೆರವುಗೊಳಿಸುವುದು ಮೀನಾಮೇಷ ಎಣಿಸುತ್ತಿದೆ’ ಎಂದು ಕಾಲೊನಿ ನಿವಾಸಿ ಗಂಗರಾಜು ಹೇಳುತ್ತಾರೆ.

ಜಿಲ್ಲಾಧಿಕಾರಿಗೆ ಪತ್ರ: ಆಸ್ಪತ್ರೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶಾಲಾ, ಕಾಲೇಜು ಹಾಗೂ ಇತರ ಸಂಸ್ಥೆಗಳನ್ನು ಕೂಡ ತಮಿಳು ಕಾಲೊನಿ ನಿವಾಸಿಗಳ ಜೊತೆಯಲ್ಲೇ ತೆರವುಗೊಳಿಸಬೇಕು. ಶ್ರೀಮಂತರನ್ನು ಬಿಟ್ಟು ಬಡವರನ್ನು ಮಾತ್ರ ತೆರವುಗೊಳಿಸಬಾರದು. ಅಧಿಕಾರಿಗಳು ತಾರತಮ್ಯ ಮಾಡದೇ ಎಲ್ಲರನ್ನೂ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ತಮಿಳು ಕಾಲೊನಿ ನಿವಾಸಿಗಳು ಈಚೆಗೆ ಜಿಲ್ಲಾಧಿಕಾರಿ ಎಸ್‌.ಅಶ್ವತಿ ಅವರಿಗೆ ಪತ್ರ ಬರೆದಿದ್ದಾರೆ.

‘ಶ್ರೀಮಂತರು ಅಕ್ರಮ ದಾಖಲಾತಿ ಸೃಷ್ಟಿಸಿಕೊಂಡು ಆಸ್ಪತ್ರೆ ಭೂಮಿ ಕಬಳಿಸಿದ್ದಾರೆ. ನಾವು ಜಾಗ ಬಿಟ್ಟುಕೊಡಲು ಸಿದ್ಧರಿದ್ದೇವೆ, ಗುಡಿಸಲು ಬಿಟ್ಟು, ಗಂಟುಮೂಟೆ ಕಟ್ಟಿಕೊಂಡು ಪರ್ಯಾಯ ಸ್ಥಳಕ್ಕೆ ತೆರಳುತ್ತೇವೆ. ಆದರೆ ಅದಕ್ಕೂ ಮೊದಲು ಆಸ್ಪತ್ರೆ ಜಾಗದಲ್ಲಿ ಶಾಲೆ, ಕಾಲೇಜು ಕಟ್ಟಿಕೊಂಡಿರುವ ಪ್ರಭಾವಿ ವ್ಯಕ್ತಿಗಳ ಆಸ್ತಿಗಳನ್ನೂ ತೆರವುಗೊಳಿಸಬೇಕು. ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಎಂಬ ತಾರತಮ್ಯ ಮಾಡಬಾರದು. ಶ್ರೀಮಂತರನ್ನು ಬಿಟ್ಟು ಬಡವರನ್ನು ಮಾತ್ರ ತೆರವುಗೊಳಿಸಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಚಳವಳಿ ನಡೆಸುತ್ತೇವೆ’ ಎಂದು ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಮುಖಂಡ ಟಿ.ಮಹೇಂದ್ರನ್‌ ಎಚ್ಚರಿಸಿದರು.

*******

ನಗರಸಭೆಯಿಂದ ಅಕ್ರಮ ಮಂಜೂರಾತಿ

‘ಆಸ್ಪತ್ರೆ ಜಾಗವನ್ನು ನಗರಸಭೆ ಅಧಿಕಾರಿಗಳು, ತಹಶೀಲ್ದಾರ್‌ ಖಾಸಗಿ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಅಕ್ರಮವಾಗಿ ಮಂಜೂರು ಮಾಡಿದ್ದಾರೆ. ತಮಿಳು ನಿವಾಸಿಗಳು ವಾಸಿಸುವ 576 ಶೆಡ್‌, ಮನೆ ಜೊತೆಗೆ 90 ಖಾಸಗಿ ಕಟ್ಟಡಗಳ ತೆರವಿಗೆ ಒತ್ತಾಯಿಸಿ ನಾವು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆವು. ಆದರೆ ನ್ಯಾಯಮೂರ್ತಿಗಳು ಮೊದಲ ಹಂತದಲ್ಲಿ 576 ಶೆಡ್‌ ತೆರವಿಗೆ ಆದೇಶ ನೀಡಿದ್ದರು’ ಎಂದು ದೂರುದಾರ, ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ತಿಳಿಸಿದರು.

‘ಅಕ್ರಮ ಮಂಜೂರಾತಿ ವಿರುದ್ಧ ಮಿಮ್ಸ್‌ ಆಡಳಿತ ಮಂಡಳಿ ಹೋರಾಡಬೇಕು. ಜಿಲ್ಲಾಡಳಿತ ಮನಸ್ಸು ಮಾಡಿದರೆ ತಮಿಳು ಕಾಲೊನಿ ನಿವಾಸಿಗಳ ಜೊತೆಯಲ್ಲೇ ಖಾಸಗಿ ಮಾಲೀಕರನ್ನೂ ತೆರವುಗೊಳಿಸಬಹುದು. ಆದರೆ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲ’ ಎಂದು ಅವರು ವಿಷಾದಿಸಿದರು.

****

ಮೊದಲು ತಮಿಳು ಕಾಲೊನಿಯನ್ನು ಸ್ಥಳಾಂತರ ಮಾಡಲಾಗುವುದು. ನಂತರ ಖಾಸಗಿ ಕಟ್ಟಡಗಳ ತೆರವು ಕುರಿತಂತೆ ಪರಿಶೀಲನೆ ನಡೆಸಲಾಗುವುದು

– ಎಸ್‌.ಅಶ್ವತಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.