
ಮದ್ದೂರು: ಶಿಂಷಾ ನದಿ ದಡದಲ್ಲಿರುವ ತಾಲ್ಲೂಕಿನ ಕದಲೀಪುರ ಗ್ರಾಮದ ಶ್ರೀ ಕದಲೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ.
ದೇವಸ್ಥಾದ ಹಿನ್ನೆಲೆ: ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದು, ದೇವಸ್ಥಾನದ ಮುಂದೆ ಹರಿಯುವ ಶಿಂಷಾ ನದಿಯ ಬಳಿ ಹಿಂದೆ ಕದಂಬ ಋಷಿಗಳು ತಪಸ್ಸು ಮಾಡಿದ್ದರಿಂದ ನದಿಯನ್ನು ಕದಂಬ ನದಿ ಎಂದು ಕರೆಯುತ್ತಿದ್ದರು ಎನ್ನುವುದು ಸ್ಥಳ ಪುರಾಣ ಹೇಳುತ್ತದೆ.
ಕದಂಬ ನದಿಯ ಬಳಿಯಿರುವ ಈ ದೇವಸ್ಥಾನವು ಕದಂಬ ಕ್ಷೇತ್ರವಾಗಿದ್ದು, ಈ ಕಾರಣಕ್ಕೆ ಕದಲೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಎಂದೂ ಹಾಗೂ ಗ್ರಾಮಕ್ಕೆ ಕದಲೀಪುರ ಎಂದೂ ಹೆಸರು ಬಂದಿದೆ.
ಕದಂಬ ನದಿ (ಈಗಿನ ಶಿಂಷಾ ನದಿ) ದಿಕ್ಕಿಗೆ ದೇವರ ಮೂರ್ತಿ ಮುಖ ಮಾಡಿದೆ. ಶ್ರೀ ದೇವಿ ಹಾಗೂ ಭೂದೇವಿ ಸಮೇತ ಏಕ ಶಿಲಾ ಮೂರ್ತಿಯು ಮನಮೋಹಕವಾಗಿದೆ.
ಪುರಾತನ ಕಾಲದ ದೇವಸ್ಥಾನವನ್ನು ಗ್ರಾಮದವರೇ ಆದ ಈಗ ಬೆಂಗಳೂರಿನಲ್ಲಿ ನೆಲಸಿರುವ ಕದಲೀಪುರ ಶಿವರಾಮು ಅವರು 2012ರಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ಜೀರ್ಣೋದ್ಧಾರಗೊಳಿಸಿದ್ದರು. ಈಗಲೂ ಪ್ರತಿ ವರ್ಷ ಅವರ ನೇತೃತ್ವದಲ್ಲಿಯೇ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ತಾಲ್ಲೂಕು ಸೇರಿ ಜಿಲ್ಲೆ ಹಾಗೂ ಹಲವು ಜಿಲ್ಲೆಗಳಿಂದ 15 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ವೈಕುಂಠ ಬಾಗಿಲು ಪ್ರವೇಶಿಸಿ ದೇವರ ದರ್ಶನ ಪಡೆಯುತ್ತಾರೆ.
ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ಐಯ್ಯಂಗಾರ್ ಅವರು ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಮುಂಜಾನೆಯಿಂದಲೇ ದೇವರ ಮೂರ್ತಿಗೆ ಅಭಿಷೇಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಭಕ್ತಿ ಗೀತಾ ಗಾಯನ ಕಾರ್ಯಕ್ರಮ ನಡೆಯಲಿವೆ. ದೇವರ ದರ್ಶನ ಪಡೆದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎನ್ನುವುದು ಭಕ್ತರ ನಂಬಿಕೆ.
ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕದಲೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ವೈಕುಂಠ ಏಕಾದಶಿಯನ್ನು ಗ್ರಾಮಸ್ಥರ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಸಿಕೊಂಡು ಬರುವ ಮೂಲಕ ಕೈಲಾದ ಭಗವಂತನ ಸೇವೆ ಮಾಡುತ್ತಿದ್ದೇನೆ ಕದಲೀಪುರ ಶಿವರಾಮು ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸಮಿತಿಯ ಟ್ರಸ್ಟ್ ಅಧ್ಯಕ್ಷ
ಕದಲೀಪುರ ಗ್ರಾಮದ ಪುರಾತನ ದೇವಸ್ಥಾನವಾದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನವು ಬಹಳ ಪ್ರಸಿದ್ಧಿ ಪಡೆದಿದ್ದು ವೈಕುಂಠ ಏಕಾದಶಿ ದಿನ ಸಹಸ್ರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ನಾರಾಯಣ ಐಯ್ಯಂಗಾರ್ ಪ್ರಧಾನ ಅರ್ಚಕರು ಕದಲೀಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.