ADVERTISEMENT

ವೈರಮುಡಿ ಕಿರೀಟ ಉತ್ಸವ: ಅರ್ಚಕರ ನಡುವೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 2:22 IST
Last Updated 25 ಮಾರ್ಚ್ 2021, 2:22 IST
ಶ್ರೀರಂಗಪಟ್ಟಣ ತಾಲ್ಲೂಕು ಕಿರಂಗೂರು ಬಳಿ ಇಬ್ಬರು ಅರ್ಚಕರು ಬುಧವಾರ ಪರಸ್ಪರ ವಾಗ್ವಾದ ನಡೆಸಿದರು
ಶ್ರೀರಂಗಪಟ್ಟಣ ತಾಲ್ಲೂಕು ಕಿರಂಗೂರು ಬಳಿ ಇಬ್ಬರು ಅರ್ಚಕರು ಬುಧವಾರ ಪರಸ್ಪರ ವಾಗ್ವಾದ ನಡೆಸಿದರು   

ಶ್ರೀರಂಗಪಟ್ಟಣ: ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವದ ನಿಮಿತ್ತ ಮಂಡ್ಯದಿಂದ ತಾಲ್ಲೂಕಿನ ವಿವಿಧ ಗ್ರಾಮಗಳ ಮೂಲಕ ತೆರಳಿದ ವೈರಮುಡಿ ಕಿರೀಟದ ಉತ್ಸವದ ವೇಳೆ, ಕಿರೀಟದ ಜತೆ ತೆರಳುತ್ತಿದ್ದ ಇಬ್ಬರು ಅರ್ಚಕರು ಪರಸ್ಪರ ವಾಗ್ವಾದ ನಡೆಸಿದರು.

ತಾಲ್ಲೂಕಿನ ಗಡಿಭಾಗದಿಂದ ಆರಂಭವಾದ ಅರ್ಚಕರ ವಾಗ್ವಾದ ಗಣಂಗೂರು, ಕೆ.ಶೆಟ್ಟಹಳ್ಳಿ, ಬಾಬುರಾಯನಕೊಪ್ಪಲು, ಕಿರಂಗೂರು, ದರಸಗುಪ್ಪೆ ಗ್ರಾಮಗಳವರೆಗೂ ಮುಂದುವರೆಯಿತು. ಕಿರೀಟವನ್ನು ಇಳಿಸಿ ಪೂಜೆ ಸಲ್ಲಿಸಲು ಜನರು ಮುಂದಾಗುವ ವೇಳೆ ಒಬ್ಬರಿಗೊಬ್ಬರು ಟೀಕೆಯಲ್ಲಿ ತೊಡಗುತ್ತಿದ್ದರು. ಅರ್ಚಕರ ಈ ವರ್ತನೆ ಭಕ್ತರು ಮತ್ತು ಅಧಿಕಾರಿಗಳಲ್ಲಿ ಬೇಸರ ಉಂಟು ಮಾಡಿತು.

ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಮದಮೂರ್ತಿ ಹಾಗೂ ತಹಶೀಲ್ದಾರ್‌ ಎಂ.ವಿ.ರೂಪಾ ಅವರು ಅರ್ಚಕರನ್ನು ಅಲ್ಲಲ್ಲಿ ಸಮಾಧಾನಪಡಿಸಿದರು. ಅಧಿಕಾರಿಗಳ ಮಾತನ್ನು ಕಿವಿಗೆ ಹಾಕಿಕೊಳ್ಳದ ಅರ್ಚಕರು ಪರಸ್ಪರ ರೇಗಾಡುವುದು ಮುಂದುವರೆಸಿದ್ದು ಟೀಕೆಗೆ ಗ್ರಾಸವಾಯಿತು.‌

ADVERTISEMENT

ಮಂಡ್ಯದಿಂದ ತಾಲ್ಲೂಕಿಗೆ ಆಗಮಿಸಿದ ವೈರಮುಡಿ ಕಿರೀಟವನ್ನು ತಾಲ್ಲೂಕಿನ ಗಡಿಭಾಗವಾದ ಕೋಡಿಶೆಟ್ಟಿಪುರ ಬಳಿ ತಹಶೀಲ್ದಾರ್‌ ಎಂ.ವಿ. ರೂಪಾ ಸ್ವಾಗತಿಸಿದರು. ದಾರಿಯುದ್ದಕ್ಕೂ ಪೂಜೆಗಳು ನಡೆದವು. ಕಿರಂಗೂರು ಬನ್ನಿಮಂಟಪ, ಶ್ರೀರಾಮ ಮಂದಿರ, ಆನಂದಾಳ್ವಾರ್‌ ಮಂಟಪ ಮತ್ತು ದರಸಗುಪ್ಪೆಯ ಶ್ರೀರಾಮ ಮಂದಿರದಲ್ಲಿ ಕೆಲಕಾಲ ಇರಿಸಿ ಪೂಜೆ ಸಲ್ಲಿಸಲಾಯಿತು. ವಿವಿಧೆಡೆ ಪ್ರಸಾದ ವಿತರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.