ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ಬಾಳೆಕಂದು, ಹೂ–ಹಣ್ಣುಗಳನ್ನು ಜನರು ಖರೀದಿಸಿದರು
ಮಂಡ್ಯ: ಜಿಲ್ಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ಹೂವು, ಹಣ್ಣುಗಳ ಬೆಲೆ ಹೆಚ್ಚಳವಾಗಿದ್ದರೂ ಖರೀದಿ ಜೋರಾಗಿಯೇ ನಡೆಯಿತು.
ನಗರದ ಮಹಾವೀರ ವೃತ್ತ, ವಿ.ವಿ. ರಸ್ತೆ, ಹೊಸಹಳ್ಳಿ ಸರ್ಕಲ್, ಗುತ್ತಲು ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳ ರಸ್ತೆ ಬದಿಯಲ್ಲಿ ಬಾಳೆಕಂದು, ಮಾವಿನ ಸೊಪ್ಪು, ತಾವರೆ ಹೂಗಳ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿತ್ತು. ಒಂದು ಬಾಳೆ ಕಂದಿಗೆ ₹40ರಿಂದ ₹80, ಮಾವಿನ ಸೊಪ್ಪು ಕಟ್ಟಿಗೆ ₹30, ಎರಡು ತಾವರೆ ಹೂ ₹80ರಂತೆ ಮಾರಾಟವಾಯಿತು.
ಮನೆಯಲ್ಲಿ ಲಕ್ಷ್ಮಿ ಮೂರ್ತಿಗಳನ್ನಿಟ್ಟು ಪೂಜಿಸಲಾಗುತ್ತದೆ. ವರಮಹಾಲಕ್ಷ್ಮಿ ಪೂಜೆಗೆಂದೇ ವಿಶೇಷವಾಗಿ ತಾವರೆ ಹೂಗಳನ್ನು ಬಳಸಲಾಗುತ್ತದೆ. ಹಾಗಾಗಿ ತಾವರೆ ಹೂವುಗಳಿಗೆ ಭಾರಿ ಬೇಡಿಕೆಯಿತ್ತು.
‘ಯಾವುದೇ ಹಬ್ಬ ಬಂದರೆ ಸಾಕು ಹೂವು, ಹಣ್ಣುಗಳ ಬೆಲೆಯನ್ನು ಕೇಳುವುದಕ್ಕೇ ಆಗುವುದಿಲ್ಲ, ಜೊತೆಗೆ ಬೆಲೆ ಹೆಚ್ಚಳವಾಗಿದ್ದರೂ ಅನಿವಾರ್ಯವಾಗಿ ಖರೀದಿ ಮಾಡಲೇಬೇಕಾಗಿದೆ. ಈ ಬೆಲೆ ಹೆಚ್ಚಳದಿಂದ ರೈತರಿಗೆ ಅನುಕೂಲ ಆಗುವುದಿಲ್ಲ. ಬಹುತೇಕ ಮಧ್ಯವರ್ತಿಗಳಿಗೇ ಲಾಭವಾಗುತ್ತದೆ’ ಎಂದು ಗೃಹಿಣಿಯರಾದ ಬಿ.ರಶ್ಮಿ, ಹೇಮಾಮಾಲಿನಿ, ಸುನೀತಾ ಹೇಳಿದರು.
ತರಕಾರಿ (ಕೆ.ಜಿ.ಗೆ) ಸಿಹಿಗೆಣಸು ₹25, ಮೂಲಂಗಿ, ಮಂಗಳೂರು ಸೌತೆ, ಹೂಕೋಸು, ಎಲೆಕೋಸು ₹30, ಈರೇಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಬೂದುಗುಂಬಳ, ಆಲೂಗೆಡ್ಡೆ, ಬೀಟ್‌ರೂ ಟ್, ಮರಗೆಣಸು ₹40, ಹಾಗಲಕಾಯಿ, ಅವರೆಕಾಯಿ, ಸಿಹಿಗುಂಬಳ ₹50, ಗೆಡ್ಡೆಕೋಸು, ಹಸಿರು ಮೆಣಸಿನಕಾಯಿ ₹60, ಕ್ಯಾರೆಟ್, ಬೀನ್ಸ್, ದಪ್ಪಮೆಣಸಿನಕಾಯಿ ₹80, ಸುಂಠಿ ₹120, ರಾಜ್ ಈರುಳ್ಳಿ ₹100, ಹಸಿಬಟಾಣಿ ₹200 ರಂತೆ ಪ್ರತಿ ಕೆ.ಜಿ.ಗೆ ಮಾರಾಟವಾದರೆ ಒಂದು ನಿಂಬೆಹಣ್ಣಿಗೆ ₹5ರಿಂದ ₹6ರಂತೆ ಮಾರಾಟ ಮಾಡಲಾಗುತ್ತಿತ್ತು.
ಪಪ್ಪಾಯಿ, ಕಲ್ಲಂಗಡಿ ₹36, ಪಚ್ಚಬಾಳೆ ₹44, ಏಲಕ್ಕಿಬಾಳೆ, ಸೀಬೆ ₹100, ಮೂಸಿಂಬೆ ₹80, ಕಪ್ಪು ದ್ರಾಕ್ಷಿ ₹120, ಡ್ರ್ಯಾಗನ್ ಫ್ರೂಟ್ ₹140, ಕಿವಿಹಣ್ಣು (ಬಾಕ್ಸ್)₹160, ಕಿತ್ತಳೆ ₹220, ದಾಳಿಂಬೆ ₹280, ಆಸ್ಟ್ರೇಲಿಯಾ ಸೇಬು ₹300, ರಾಯಲ್ ಗಾಲ ಸೇಬು ₹360 ರಂತೆ ಪ್ರತಿ ಕೆಜಿಗೆ ಮಾರಾಟ ಮಾಡಲಾಗುತ್ತಿದೆ.
ಹೂವಿಗೆ ಭರ್ಜರಿ ಬೇಡಿಕೆ
ವರಮಹಾಲಕ್ಷ್ಮಿ ಹಬ್ಬಕ್ಕೆ ಮೂರು ದಿನಗಳ ಮುಂಚಿತವಾಗಿಯೇ ಕನಕಾಂಬರ, ಮಲ್ಲಿಗೆ, ಮರಳೆ, ಕಾಕಡ ಹೂವುಗಳ ಬೆಲೆಯು ಹೆಚ್ಚಳವಾಗಿದೆ. ಹಳದಿ ಮತ್ತು ಕೆಂಪು ಚೆಂಡು ಹೂವು ₹60ರಿಂದ ₹70, ಸಣ್ಣಗುಲಾಬಿ ₹300, ಸುಗಂಧರಾಜ, ಸೇವಂತಿಗೆ ₹350, ಬಟನ್ಸ್, ಬಿಳಿ ಸೇವಂತಿಗೆ ₹400, ಗಣಗಲೆ ₹450, ಕಲ್ಕತ್ತಾ ಮಲ್ಲಿಗೆ ₹600, ಕಾಕಡ ₹1000, ಮರಳೆ ₹1500, ಮಲ್ಲಿಗೆ ₹2,000, ಕನಕಾಂಬರ ₹2,500ರಂತೆ ಕೆ.ಜಿ.ಗೆ ಮಾರಾಟವಾದವು.
ತುಳಸಿ ₹50, ಹಳದಿ ಮತ್ತು ಕೆಂಪು ಚೆಂಡು ಹೂವು ₹80, ಸೇವಂತಿಗೆ, ಗಣಗಲೆ ₹100, ಬಟನ್ಸ್, ಬಿಳಿಸೇವಂತಿಗೆ, ಕಾಕಡ. ಮರಳೆ ₹150, ಕನಕಾಂಬರ ₹200, ಮಲ್ಲಿಗೆ ₹300ರಂತೆ ಪ್ರತಿ ಮಾರಿಗೆ ಮಾರಾಟವಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.