ADVERTISEMENT

ಮಂಡ್ಯ | ಸ್ವಾಮಿ ವಿವೇಕಾನಂದರ ತತ್ವ ಶಾಶ್ವತ: ಜಿಲ್ಲಾಧಿಕಾರಿ

ಯುವ ದಿನಾಚರಣೆ; ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 5:07 IST
Last Updated 13 ಜನವರಿ 2023, 5:07 IST
ಮಂಡ್ಯ ಜಿಲ್ಲಾಡಳಿತದಿಂದ ನಡೆದ ಸ್ವಾಮಿ ವಿವೇಕಾನಂದ ಜನ್ಮದಿನ ಸಮಾರಂಭವನ್ನು ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಉದ್ಘಾಟಿಸಿದರು
ಮಂಡ್ಯ ಜಿಲ್ಲಾಡಳಿತದಿಂದ ನಡೆದ ಸ್ವಾಮಿ ವಿವೇಕಾನಂದ ಜನ್ಮದಿನ ಸಮಾರಂಭವನ್ನು ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಉದ್ಘಾಟಿಸಿದರು   

ಮಂಡ್ಯ: ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ, ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದ ಅಂಗವಾಗಿ ಗುರುವಾರ ಜಿಲ್ಲೆಯಾದ್ಯಂತ ವಿವಿಧೆಡೆ ವಿಶೇಷ ಸಮಾರಂಭಗಳು ನಡೆದವು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ಸಮಾರಂಭದಲ್ಲಿ ವಿವೇಕ ಸ್ಮರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾ ಲಕೃಷ್ಣ ‘ಸ್ವಾಮಿ ವಿವೇಕಾನಂದರು ಜೀವಿಸಿದ ಅವಧಿ ಬಹಳ ಕಡಿಮೆಯಾದರೂ ಅವರ ತತ್ವಗಳು ಈ ಭೂಮಂಡಲ ಇರುವವರೆಗೂ ಚಿರಸ್ಥಾಯಿಯಾಗಿ ಉಳಿಯಲಿವೆ. ವಿವೇಕಾನಂದರ ತತ್ವಗಳು ಯುವಜನರ ಮನಸ್ಸಿಗೆ ನಾಟಬೇಕು. ಯುವಕರು ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ರಾಜ್ಯ, ರಾಷ್ಟ್ರಕ್ಕೆ ಕೀರ್ತಿ ತಂದುಕೊಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್ ಜಿ, ನೆಹರೂ ಯುವ ಕೇಂದ್ರದ ಚಿನ್ನಗಿರಿಗೌಡ, ಅರುಣಕುಮಾರಿ, ಬಿ.ಎಸ್.ಅನುಪಮಾ ಭಾಗವಹಿಸಿದ್ದರು.

ನಗರದ ಎಸ್‌.ಡಿ.ಜಯರಾಂ ಆಸ್ಪತ್ರೆಯಲ್ಲಿ ಜಿಲ್ಲಾ ಗಾಯಕರ ಟ್ರಸ್ಟ್ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನಕ್ಕೆ ಡಾ.ಚಂದ್ರಶೇಖರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ‘ಹಿಂದೂ ಧರ್ಮದ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ ಮಹಾಚೇತನ ಸ್ವಾಮಿ ವಿವೇಕಾನಂದರು. ಅವರ ತತ್ವಾದರ್ಶಗಳು ಮುಂದಿನ ಪೀಳಿಗೆಗೆ ಸಾಗಬೇಕು’ ಎಂದರು. ವೈದ್ಯಾಧಿಕಾರಿ ಡಾ.ಮಾದೇಶ್ ಮಾತನಾಡಿ ‘ವಿಶ್ವಕಂಡ, ಸೋದರತ್ವದ ಭ್ರಾತೃತ್ವವನ್ನು ಬಿತ್ತರಿಸಿದ ಹರಿಕಾರ ಸ್ವಾಮೀ ವಿವೇಕಾನಂದರನ್ನು ಸ್ಮರಿಸಿಕೊಳ್ಳುವ ಸುದಿನದಂದು ಅವರ ಕೊಡುಗೆಗಳನ್ನು ಸ್ಮರಿಸಬೇಕು’ ಎಂದು ಅವರು ಹೇಳಿದರು.


ಡಾ.ಕಾರ್ತೀಕ್, ಶುಶ್ರೂಷಕ ಸಿಬ್ಬಂದಿ ಯಾದ ಕೃಷ್ಣಮೂರ್ತಿ, ವಿದ್ಯಾಶ್ರೀ, ಆಶಾ, ಗೀರಿಶ್‌ ಫಾಧರ್ ಭಾಗವಹಿಸಿದ್ದರು.

ನಗರದ ಹಳೇನಗರದ ಮೌಲಾನಾ ಆಜಾದ್‌ ಮಾದರಿ ಶಾಲೆಯಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್ ಜಿಲ್ಲಾ ಘಟಕದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ಘಟಕ ಉದ್ಘಾಟನೆ ಕಾರ್ಯಕ್ರಮ ನಡೆಸಲಾಯಿತು. ನಂತರ ವಿವೇಕಾನಂದ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆಸೀಫಾ ಬಷೀರ್‌ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಟಿ.ವರಪ್ರಸಾದ್, ನಿಹಾಲ್‌, ಶಬಾನಾ, ಮುಖ್ಯ ಶಿಕ್ಷಕ ಸಿ.ಎಚ್‌.ಮಧುಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.