ಮಂಡ್ಯ: ‘ಒಬ್ಬ ಮನುಷ್ಯ ಮರಣಾ ನಂತರ ಏಳು ಜನರಿಗೆ ಜೀವನ ಕೊಡಬಹುದು. ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ. ಅಂಗಾಂಗ ದಾನ ಮಹತ್ವದ ಕುರಿತು ಸಾರ್ವಜನಿಕರು ತಿಳಿಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ತಾಲ್ಲೂಕಿನ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಆದಿಚುಂಚನಗಿರಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಮ್ಮ ಜೀವ ಮತ್ತೊಬ್ಬರಿಗೆ ಆಸರೆಯಾಗಿರಲಿ' ಎಂಬ ವಿನೂತನ ವಾಕಥಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ನಾನು ಮೊದಲ ಬಾರಿ ಶಾಸಕನಾಗಿದ್ದಾಗ ಗ್ರಾಮೀಣ ಪ್ರದೇಶದಲ್ಲಿ ಅಂಗಾಂಗ ಕಳೆದುಕೊಂಡವರಿಗೆ ಪುನರ್ಜೀವನ ಕೊಡಬೇಕು ಎಂಬ ಮಹತ್ವದ ಕನಸನ್ನು ಬಾಲಗಂಗಾಧರನಾಥ ಸ್ವಾಮೀಜಿ ಅವರು ಹೊಂದಿದ್ದರು. ಅಂತರರಾಷ್ಟ್ರೀಯ ಮಟ್ಟದ ವೈದ್ಯರನ್ನು ಕರೆಸಿ ಅಂಗಾಂಗ ವೈಫಲ್ಯ ಹೊಂದಿದವರಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಇಂದು ಅವರ ದೂರದೃಷ್ಟಿ ಬೆಳೆದು ನಿಂತಿದೆ. ಇದರ ಜೊತೆ ಇನ್ನೂ ಅನೇಕ ಸಾಮಾಜಿಕ ಸೇವೆಯನ್ನು ನಿರ್ಮಲಾನಂದ ಸ್ವಾಮೀಜಿ ಅವರು ಸಮಾಜಕ್ಕೆ ನೀಡುತ್ತಾ ಬಂದಿದ್ದಾರೆ’ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಮನುಷ್ಯ ಸತ್ತ ನಂತರವೂ ಬೇರೆ ಬೇರೆ ರೀತಿಯಲ್ಲಿ ನಾವು ಉಳಿಯಲು ಅವಕಾಶವಿದೆ. ಜಗತ್ತನ್ನು ನೋಡುವ ಕಣ್ಣುಗಳು, ದೇಹವನ್ನು ಶುದ್ಧೀಕರಣ ಮಾಡುವ ಪಿತ್ತ ಜನಕಾಂಗ ಮತ್ತು ಮೂತ್ರಪಿಂಡಗಳು, ಶ್ವಾಸಕೋಶ, ಹೃದಯಗಳನ್ನು ದಾನ ಮಾಡುವ ಮೂಲಕ ಸತ್ತ ನಂತರವೂ ಇನ್ನಿಬ್ಬರ ಬದುಕಿಗೆ ಆಸರೆಯಾಗಬಹುದು’ ಎಂದು ಹೇಳಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಮಾತನಾಡಿ, ‘ಆದಿಚುಂಚನಗಿರಿ ಮಠವು ಅನ್ನ, ಅಕ್ಷರ ಹಾಗೂ ಆರೋಗ್ಯ ಸೇವೆ ನೀಡುವ ಮೂಲಕ ನಾಡಿನಾದ್ಯಂತ ಹೆಸರಾಗಿದೆ’ ಎಂದರು.
ಶಾಸಕ ಶರತ್ ಬಚ್ಚೇಗೌಡ, ನಟ ಧ್ರುವಸರ್ಜಾ ಮಾತನಾಡಿದರು. ಆದಿನಾಥ ರಸ್ತೆಯಿಂದ ಗಣ್ಯರೊಂದಿಗೆ ಪ್ರಾರಂಭಗೊಂಡ ನಡಿಗೆ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬೆಳ್ಳೂರು ಕ್ರಾಸ್ ತಲುಪಿ, ನಂತರ ಬೆಳ್ಳೂರು ಕ್ರಾಸ್‌ನ ಸೇತುವೆ ಕೆಳಗಿನ ರಸ್ತೆಯ ಮೂಲಕ ವಾಪಸ್ ಆದಿಚುಂಚನಗಿರಿ ವಿವಿ ಆವರಣದಲ್ಲಿರುವ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪ್ರತಿಮೆ ಬಳಿ ಅಂತ್ಯಗೊಂಡಿತು.
ಜಾಥಾದಲ್ಲಿ ಐಜಿಪಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಕುಮಾರ್, ಶಾಸಕರಾದ ರಂಗನಾಥ್, ಸಿ.ಎನ್. ಬಾಲಕೃಷ್ಣ, ರಮೇಶ ಬಂಡಿಸಿದ್ದೇಗೌಡ, ಸ್ಟಾರ್ ಚಂದ್ರು, ಗೋಪಾಲ್ ಸ್ವಾಮಿ ಸೇರಿದಂತೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಂ ಕಾರ್ಯಕ್ರಮ ನಿರೂಪಿಸಿದರು. ಎಸಿಯು ಉಪ ಕುಲಪತಿ ಶ್ರೀಧರ್, ಆಸ್ಪತ್ರೆಯ ಮುಖ್ಯಸ್ಥ ಡಾ.ಶಿವಕುಮಾರ್, ಸಂಪರ್ಕಾಧಿಕಾರಿ ಧರ್ಮೇಂದ್ರ, ಮೃಜೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.