ADVERTISEMENT

ಪಾಂಡವಪುರ: ಮರೆಯಾದ ‘ನಡೆದಾಡುವ ಗಾಂಧಿ’ ಕೆಂಪೇಗೌಡ

ಚಿನಕುರಳಿ ಗ್ರಾಮದಲ್ಲಿ ನೀರವ ಮೌನ; ಸ್ವಯಂ ಪ್ರೇರಣೆಯಿಂದ ಅಂಗಡಿ ಬಂದ್‌ ಮಾಡಿದ ವ್ಯಾಪಾರಿಗಳು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 16:52 IST
Last Updated 8 ಸೆಪ್ಟೆಂಬರ್ 2022, 16:52 IST
ಪಾಂಡವಪುರ ತಾಲ್ಲೂಕಿನ ಚಿನಕುರಳಿ ಗ್ರಾಮದಲ್ಲಿ ಕೆ.ಕೆಂಪೇಗೌಡರ ಅಂತಿಮ ದರ್ಶನ ಪಡೆದ ಜನರು (ಎಡಚಿತ್ರ). ಚಿನಕುರಳಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಿ ಕೆಂಪೇಗೌಡರಿಗೆ ಗೌರವ ಸಲ್ಲಿಸಲಾಯಿತು
ಪಾಂಡವಪುರ ತಾಲ್ಲೂಕಿನ ಚಿನಕುರಳಿ ಗ್ರಾಮದಲ್ಲಿ ಕೆ.ಕೆಂಪೇಗೌಡರ ಅಂತಿಮ ದರ್ಶನ ಪಡೆದ ಜನರು (ಎಡಚಿತ್ರ). ಚಿನಕುರಳಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಿ ಕೆಂಪೇಗೌಡರಿಗೆ ಗೌರವ ಸಲ್ಲಿಸಲಾಯಿತು   

ಪಾಂಡವಪುರ: ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಶಾಸಕ ಕೆ.ಕೆಂಪೇಗೌಡ (96) ವಯೋಸಹಜ ಅನಾರೋಗ್ಯದಿಂದ ಗುರುವಾರ ಸ್ವಗ್ರಾಮ ಚಿನಕುರಳಿಯಲ್ಲಿ ನಿಧನರಾದರು.

ಸರಳ ಸಜ್ಜನಿಕೆಗೆ ಹೆಸರಾಗಿದ್ದ ಕೆ.ಕೆಂಪೇಗೌಡರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಚಿನಕುರಳಿಯಲ್ಲಿರುವ ಅಂಗಡಿಗಳನ್ನು ಮಾಲೀಕರು ಸ್ವಯಂ ಪ್ರೇರಣೆಯಿಂದ ಬಂದ್‌ ಮಾಡಿದರು. ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.

ಕೆಂಪೇಗೌಡರ ಪಾರ್ಥಿವ ಶರೀರವನ್ನು ರಥದಲ್ಲಿ ಕೂರಿಸಿ ಚಿನಕುರಳಿಯ ರಾಜ್ಯ ಹೆದ್ದಾರಿ ಹಾಗೂ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಜನರು ಹೂ ಹಾಕಿ ನಮಸ್ಕರಿಸಿದರು. ಕೆಂಪೇಗೌಡರ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ, ತೋಟದ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಕೆಂಪೇಗೌಡರ ನಾಲ್ವರು ಪುತ್ರರು, ಐವರು ಪುತ್ರಿಯರು, ಮೊಮ್ಮಕ್ಕಳು, ಬಂಧುಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಗಣ್ಯರಿಂದ ಅಂತಿಮ ದರ್ಶನ: ಸಚಿವ ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ, ಶಾಸಕರಾದ ಅಶ್ವಿನ್ ಕುಮಾರ್, ಜಿ.ಟಿ.ದೇವೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್, ಜಿ.ಬಿ.ಶಿವಕುಮಾರ್, ಬಿ.ಪ್ರಕಾಶ್, ಬೇಬಿಬೆಟ್ಟ ಮಠದ ಶಿವಬಸವ ಸ್ವಾಮೀಜಿ, ಕೊಮ್ಮೇರಹಳ್ಳಿ ಮಠದ ಪುರುಷೋತ್ತಮನಂದ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.

ರಾಜಕೀಯ ಏಳುಬೀಳು: ಕೆ.ಕೆಂಪೇಗೌಡರು 1978ರಲ್ಲಿ ಚಿನಕುರಳಿ ಮಂಡಲ ಪಂಚಾಯಿತಿಗೆ ಆಯ್ಕೆಯಾಗಿ ಅಧ್ಯಕ್ಷರಾಗುವ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದ್ದರು. 1983ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಪಾಂಡವಪುರ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಕೆಂಗೇಗೌಡರನ್ನು ಸೋಲಿಸಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. 1985ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆಂಪೇಗೌಡರಿಗೆ ಜನತಾ ಪಕ್ಷದಿಂದ ಟಿಕೆಟ್ ದೊರೆಯದ ಕಾರಣ ಪಕ್ಷೇ‌ತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತ್ತೆ ಕೆ.ಎಂ.ಕೆಂಗೇಗೌಡರ‌ನ್ನು ಸೋಲಿಸಿ ಎರಡನೇ ಬಾರಿ ಶಾಸಕರಾದರು. ಬಳಿಕ 1994ರ‌ಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದರು. ಆದರೆ, ರೈತ ಸಂಘದ ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾಗಿ ಆಯ್ಕೆಯಾದರು. 1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿ ರೈತ ಸಂಘದ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಸೋಲಿಸಿದ್ದರು. ನಂತರ, 2008ರಲ್ಲಿ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪರಾಭವಗೊಂಡರು. ಆ ನಂತರ ರಾಜಕೀಯದಿಂದ ದೂರ ಉಳಿದಿದ್ದರು.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಂಪೇಗೌಡ

ಮಾಜಿ ಶಾಸಕ ಕೆಂಪೇಗೌಡರು ಮೂರು ಬಾರಿ ಶಾಸಕರಾಗಿದ್ದರೂ ಬಸ್ಸಿನಲ್ಲಿಯೇ ಪ್ರಯಾಣಿಸುತ್ತಿದ್ದರು. ಸ್ವಂತ ಕಾರನ್ನು ಅವರು ಹೊಂದಿರಲಿಲ್ಲ. ಶಾಸಕರಾಗಿದ್ದಾಗ ಹಳ್ಳಿ ಹಳ್ಳಿಗಳಿಗೆ ತೆರಳಿ ಜನರು ಸಮಸ್ಯೆಯನ್ನು ಆಲಿಸಿ ಸ್ಪಂದಿಸುತ್ತಿದ್ದರು. ಹಳ್ಳಿಗಳಲ್ಲಿ ಉಂಟಾಗುತ್ತಿದ್ದ ಜಗಳನ್ನು ಕೂತು ಬಗೆಹರಿಸುತ್ತಿದ್ದರು. ಪೊಲೀಸ್ ಠಾಣೆಯ ಮೆಟ್ಟಿಲೇರಲು ಬಿಡುತ್ತಿರಲಿಲ್ಲ. ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಕೆಂಪೇಗೌಡರು ತನ್ನ ಮಕ್ಕಳನ್ನು ಎಂದೂ ರಾಜಕೀಯಕ್ಕೆ ಬರಲು ಬಿಟ್ಟಿರಲಿಲ್ಲ. ಕುಟುಂಬ ರಾಜಕಾರಣ ಮಾಡಿದವರಲ್ಲ. ಬೈಕ್‌, ಬಸ್‌ಗಳಲ್ಲಿ ಹಾಗೂ ನಡಿಗೆ ಮೂಲಕವೇ ಜನರ ಬಳಿ ಹೋಗುತ್ತಿದ್ದರು. ಇವರನ್ನು ನಡೆದಾಡುವ ಗಾಂಧಿ ಎಂದೇ ಪ್ರಸಿದ್ಧರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.