ಪಾಂಡವಪುರ: ‘ನಮ್ಮ ಜಮೀನಿಗೆ ತೆರಳಲು ರಸ್ತೆ ನಿರ್ಮಾಣ ಮಾಡಿಕೊಡಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತೇವೆ’ ಎಂದು ಬೀರಶೆಟ್ಟಹಳ್ಳಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ಮಾಡಿದರು.
ತಾಲ್ಲೂಕಿನ ಹಿರೇಮರಳಿ ರಸ್ತೆಯಲ್ಲಿ ಜಮಾವಣೆಗೊಂಡ ರೈತರು, ಕಳೆದ 3–4 ವರ್ಷಗಳಿಂದ ರಸ್ತೆ ನಿರ್ಮಾಣಕ್ಕೆ ಮನವಿ ಮಾಡಿದರೂ ತಾಲ್ಲೂಕು ಆಡಳಿತ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪಟ್ಟಣಕ್ಕೆ ಹೊಂದಿರುವ ಹಿರೋಡೆ ಕೆರೆಗೆ ಸೇರಿದ ಜಮೀನು ಅನ್ನು ತಾಲ್ಲೂಕು ಆಡಳಿತವು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಜಮೀನನ್ನು ಸರ್ವೇ ಮಾಡಿ ಗಡಿ ಗುರುತಿಸಿ ರೈತರು ಜಮೀನಿಗೆ ತೆರಳಲು ರಸ್ತೆ ಬಿಟ್ಟುಕೊಡಬೇಕಿದೆ. ಆದರೆ ಇದುವರೆಗೂ ಸರ್ವೇ ನಡೆಸಿ ಗಡಿ ಗುರುತಿಸುವ ಕೆಲಸ ಆಗಿಲ್ಲ. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿಕೊಂಡರೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಫಂದಿಸುತ್ತಿಲ್ಲ’ ಎಂದು ದೂರಿದರು.
‘ಜಮೀನಿಗೆ ತೆರಳಲು 50 ಅಡಿ ಜಾಗ ನಿಗದಿಪಡಿಸಲಾಗಿದೆ. ಈ ಸ್ಥಳದಲ್ಲಿ ರೈತರೇ ರಸ್ತೆ ನಿರ್ಮಿಸಿಕೊಳ್ಳಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಲಕ್ಷಾಂತರ ಹಣ ಹಾಕಿ ರೈತರು ರಸ್ತೆ ನಿರ್ಮಿಸಲು ಸಾಧ್ಯವೇ? ನಿಗಧಿಗೊಳಿಸಿರುವ ಜಮೀನು ಸಂಪೂರ್ಣ ಹಳ್ಳವಾಗಿದೆ’ ಎಂದು ದೂರಿದರು.
ರೈತ ಮಹಿಳೆ ಲಕ್ಷ್ಮಮ್ಮ ಮಾತನಾಡಿ, ‘ವಯಸ್ಸಾದ ನಾನು ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಆದರೆ ಜಮೀನಿಗೆ ತೆರಳಲು ರಸ್ತೆಯೇ ಇಲ್ಲ. ಜಮೀನಿಗೆ ತೆರಳಲು ರಸ್ತೆ ನಿರ್ಮಾಣ ಮಾಡಿಕೊಡದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನಿಂಗಮ್ಮ, ಲಕ್ಷ್ಮಮ್ಮ, ಮಧು, ಆನಂದ, ನಂಜುಂಡ, ಕುಳ್ಳೇಗೌಡ, ಶ್ರೀಕಂಠೇಗೌಡ, ಜವರೇಗೌಡ, ಮಧುಸೂದನ್, ಚಿದಾನಂದ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.