
ಶ್ರೀರಂಗಪಟ್ಟಣ: ಪುರಸಭೆ ವ್ಯಾಪ್ತಿಯ ಮನೆಗಳಿಗೆ, ಅಮೃತ 2.0 ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡಲು ನಲ್ಲಿಗಳಿಗೆ ಮೀಟರ್ ಅಳವಡಿಸುವುದನ್ನು ವಿರೋಧಿಸಿ ನಾಗರಿಕ ಹಿತಾಸಕ್ತಿ ವೇದಿಕೆ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಪುರಸಭೆ ಕಚೇರಿ ಎದುರು ಕೆಲಕಾಲ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ‘ಕುಡಿಯುವ ನೀರು ಸರಬರಾಜು ಮಾಡುವ ನಲ್ಲಿಗಳಿಗೆ ಮೀಟರ್ ಅಳವಡಿಸುವ ಕ್ರಮ ಅವೈಜ್ಞಾನಿಕವಾದುದು. ಪಟ್ಟಣದ ಸುತ್ತಲೂ ಕಾವೇರಿ ನದಿ ಹರಿಯುತ್ತಿದೆ. ಜನ ವಸತಿ ಸ್ಥಳದ ಪಕ್ಕದಲ್ಲೇ ಇರುವ ನೀರನ್ನು ಮನೆಗಳಿಗೆ ಸಬರಾಜು ಮಾಡಲು ಶುಲ್ಕ ವಿಧಿಸುವುದು ಸರಿಯಲ್ಲ. ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು ಕುಡಿಯುವ ನೀರಿಗೂ ಶುಲ್ಕ ವಿಧಿಸಿದರೆ ಜನರಿಗೆ ಹೊರೆಯಾಗಲಿದೆ. ಹಾಗಾಗಿ ಮೀಟರ್ ಅಳವಡಿಸುವುದನ್ನು ನಿಲ್ಲಿಸಬೇಕು’ ಎಂದು ನಾಗರಿಕ ಹಿತಾಸಕ್ತಿ ವೇದಿಕೆ ಅಧ್ಯಕ್ಷ ಮದನ್ ರಾವ್ ಆಗ್ರಹಿಸಿದರು.
‘ಪುರಸಭೆ ವ್ಯಾಪ್ತಿಯ ಪಟ್ಟಣ ಮತ್ತು ಗಂಜಾಂನ ಜನ ವಸತಿ ಪ್ರದೇಶಗಳಲ್ಲಿ ಏಳೆಂಟು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 24/7 ಶುದ್ಧ ಕುಡಿಯುವ ನೀರು ಸಿಗುತ್ತಿದೆ. ಪ್ರತಿ ಮನೆಗಳಿಗೆ ನಲ್ಲಿಗಳ ಸಂಪರ್ಕವೂ ಇದೆ. ಹೀಗಿರುವಾಗ ಿಲ್ಲಿಗೆ ಅಮೃತ 2.0 ಯೋಜನೆಯ ಅಗತ್ಯವೇನಿದೆ?’ ಎಂದು ಅವರು ಪ್ರಶ್ನಿಸಿದರು.
‘ಪಟ್ಟಣದ ಚಂದಗಾಲು ರಸ್ತೆ ಅಂಚಿನ ಕಾವೇರಿ ನದಿ ದಂಡೆಯ ಸ್ಥಾವರದಿಂದ ನೀರು ಎತ್ತುವಳಿ ಮಾಡುತ್ತಿದ್ದು, ನೀರು ಶುದ್ಧೀಕರಣ ಘಟಕಗಳಿಗೆ ತುಂಬಿಸಲಾಗುತ್ತಿದೆ. ಆದರೆ ನೀರು ಎತ್ತುವಳಿ ಮಾಡುವ ಆ ಸ್ಥಳದಲ್ಲಿ ಮೈಸೂರು ಕಡೆಯಿಂದ ಹರಿದು ಬರುವ ಕೊಳಚೆ ನೀರು ನದಿಯ ಒಡಲು ಸೇರುತ್ತಿದೆ. ಸದರಿ ಸ್ಥಳದಿಂದ ನೀರು ಎತ್ತುವಳಿ ಮಾಡುವುದನ್ನು ನಿಲ್ಲಿಸಬೇಕು. ಶುದ್ಧ ನೀರು ಲಭ್ಯ ಇರುವ ಕಡೆ ನೀರೆತ್ತುವ ಸ್ಥಾವರ ಸ್ಥಾಪಿಸಬೇಕು’ ಎಂದು ಗಂಜಾಂನ ಬಿ. ಅಭಿಷೇಕ್ ಒತ್ತಾಯಿಸಿದರು.
ಪುರಸಭೆ ವ್ಯವಸ್ಥಾಪಕಿ ನೀಲಾಂಬಿಕಾ ಅವರಿಗೆ ಮನವಿ ಸಲ್ಲಿಸಿದರು. ಬಿ. ಮಂಜುನಾಥ್, ಶ್ರೀಪಾದ, ಸಂತೋಷ್, ಗಣೇಶ್, ರಘು, ಧನುಷ್, ದೀಕ್ಷಿತ್, ವಿಕಾಸ್, ಹರ್ಷ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.