ADVERTISEMENT

ಪಾತಾಳ ಸೇರಿದ ಅಂತರ್ಜಲ; ನೀರಿಗೆ ತತ್ವಾರ

ಬತ್ತಿದ ಕೊಳವೆಬಾವಿಗಳು; ನನಸಾಗದೇ ಉಳಿದ ಕುಡಿಯುವ ನೀರು ಯೋಜನೆ

ಅಂಬರಹಳ್ಳಿ ಸ್ವಾಮಿ
Published 12 ಮೇ 2019, 6:22 IST
Last Updated 12 ಮೇ 2019, 6:22 IST
ಭಾರತೀನಗರ ಸಮೀಪದ ಕಬ್ಬಾರೆ ಗ್ರಾಮದ ಬಳಿಯಲ್ಲಿ ನೀರು ಕಾಣದೇ ನಿಂತಿರುವ ಕೊಕ್ಕರೆ ಬೆಳ್ಳೂರು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪಂಪ್‌ಹೌಸ್
ಭಾರತೀನಗರ ಸಮೀಪದ ಕಬ್ಬಾರೆ ಗ್ರಾಮದ ಬಳಿಯಲ್ಲಿ ನೀರು ಕಾಣದೇ ನಿಂತಿರುವ ಕೊಕ್ಕರೆ ಬೆಳ್ಳೂರು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪಂಪ್‌ಹೌಸ್   

ಭಾರತೀನಗರ: ಸಮೀಪದ ಬಹುತೇಕ ಹಳ್ಳಿಗಳಿಗೆ ಕೊಳವೆಬಾವಿಗಳೇ ಕುಡಿಯುವ ನೀರಿನ ಪ್ರಮುಖ ಮೂಲ. ಬೋರ್‌ವೆಲ್‌ಗಳು ಸುಸ್ಥಿತಿಯಲ್ಲಿದ್ದರೆ ಮಾತ್ರ ಜನರಿಗೆ ಕುಡಿಯಲು ನೀರು. ತಪ್ಪಿದರೆ ಕುಡಿಯುವ ನೀರಿಗೆ ಇನ್ನಿಲ್ಲದ ತತ್ವಾರ.

ಮಳವಳ್ಳಿ ಮಾರ್ಗವಾಗಿ ಮದ್ದೂರು ಪಟ್ಟಣಕ್ಕೆ ಹಾದು ಬಂದಿರುವ ಕಾವೇರಿ ಕುಡಿಯುವ ನೀರು ಯೋಜನೆ ಅಡಿಯಲ್ಲಿ ಅಣ್ಣೂರು, ಭಾರತೀನಗರ, ದೊಡ್ಡರಸಿನಕೆರೆ, ಚಿಕ್ಕರಸಿನಕೆರೆ ಗ್ರಾಮಗಳು ಮಾತ್ರ ಕಾವೇರಿ ನೀರಿನ ಸಂಪರ್ಕ ಪಡೆದುಕೊಂಡಿವೆ. ಈ ನಾಲ್ಕು ಗ್ರಾಮಗಳನ್ನು ಹೊರತು ಪಡಿಸಿದರೆ ಬಹುತೇಕ ಗ್ರಾಮಗಳಲ್ಲಿ ಕೊಳವೆಬಾವಿಗಳೇ ಕುಡಿಯುವ ನೀರಿನ ಮೂಲಗಳಾಗಿವೆ.

ತುಂಬಿ ತುಳುಕುತ್ತಿದ್ದ ಬಹುತೇಕ ಕೊಳವೆಬಾವಿಗಳ ಅಂತರ್ಜಲ ಈಗಬಿಸಿಲ ಬೇಗೆಯ ಪರಿಣಾಮ ಪಾತಾಳಕ್ಕೆ ಇಳಿದಿದೆ. ವಿದ್ಯುತ್‌ ಸಮಸ್ಯೆಯಂತೂ ಹೇಳತೀರ ದಾಗಿದೆ. ಆ ಕಾರಣದಿಂದ ದಿನಕ್ಕೊಂದು ಬಾರಿಯಾದರೂ ನೀರು ಕಾಣುತ್ತಿದ್ದ ನಲ್ಲಿಗಳಲ್ಲಿ ಕನಿಷ್ಠ ಮೂರ್ನಾಲ್ಕು ದಿನಗಳಾದರೂ ನೀರು ಕಾಣದೇ ಬಾಯ್ತೆರೆದು ಕಾಯುತ್ತಿವೆ.

ADVERTISEMENT

ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಕಿರು ನೀರು ಸರಬರಾಜು ಯೋಜನೆ ಅಡಿಯಲ್ಲಿ ನಿರ್ಮಾಣವಾಗಿದ್ದ ನೂರಾರು ತೊಂಬೆ ನಲ್ಲಿಗಳು ನೀರಿನ ಸಂಪರ್ಕವನ್ನೇ ಕಾಣದೇ ವ್ಯರ್ಥವಾಗಿ ನಿಂತಿವೆ. ನಲ್ಲಿಗಳು ಆಡು, ಕುರಿ ಕಟ್ಟುವ ತಾಣವಾಗಿ ಮಾರ್ಪಾಡಾಗಿವೆ. ಮೂರ್ನಾಲ್ಕು ದಿನಕ್ಕೊಮ್ಮೆ ಬರುವ ನೀರನ್ನು ಸಂಗ್ರಹಿಸಿಟ್ಟು ಕೊಳ್ಳಲು ಹಲವರು ತೊಟ್ಟಿ, ಟ್ಯಾಂಕ್‌ಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ.ಸ್ಥಳಾವಕಾಶದ ಕಾರಣದಿಂದ, ಹಣಕಾಸಿನ ಸಮಸ್ಯೆಯಿಂದ ನೀರು ಸಂಗ್ರಹಿಸಿಟ್ಟು ಕೊಳ್ಳಲು ಏನನ್ನೂ ಮಾಡಿ ಕೊಳ್ಳದ ಹಲವು ಬಡ ಕುಟುಂಬಗಳಿಗೆ ನೀರಿನ ಸಮಸ್ಯೆ ಕಾಡುತ್ತಿದೆ.

ನೂರಾರು ಹ್ಯಾಂಡ್‌ಪಂಪ್‌ಗಳು ಹಾಗೂ ಬಾವಿಗಳು ನೀರಿಲ್ಲದೇ ನಿಸ್ತೇಜವಾಗಿ ನಿಂತಿವೆ. ಹಲವು ಗ್ರಾಮಗಳ ಜನರು ಕುಡಿಯಲು ಶುದ್ಧ ಕುಡಿಯುವ ನೀರಿನ ಘಟಕಗಳನ್ನೇ ಆಶ್ರಯಿಸಿದ್ದಾರೆ. ತಾಂತ್ರಿಕ ಸಮಸ್ಯೆ ಉಂಟಾದರೆಶುದ್ಧ ನೀರು ಕುಡಿಯಲು ವಾರವಾದರೂ ಬೇಕಾದೀತು. ಅಂತಹ ಸಂದರ್ಭ ಮನೆಯ ಮುಂದಿನ ನಲ್ಲಿಯ ನೀರೇ ಗತಿ.

ಕೆರೆಕಟ್ಟೆಗಳಲ್ಲಿ ನೀರಿಲ್ಲದ ಪರಿಣಾಮ ಜಾನುವಾರುಗಳಿಗೂ ಜನರು ಉಪಯೋಗಿಸುವ ಕುಡಿಯುವ ನೀರೇ ಮೂಲವಾಗಿದೆ. ಹಲವು ಗ್ರಾಮಗಳಲ್ಲಿ ಜಾನುವಾರುಗಳು ಕುಡಿಯಲು ತೊಟ್ಟಿ ಗಳನ್ನು ನಿರ್ಮಿಸಲಾಗಿದೆ. ಹಲವು ಕಡೆ ಜಾನುವಾರು ಕುಡಿಯುವ ನೀರಿನ ತೊಟ್ಟಿಗಳು ನೀರು ಕಾಣದೇ ಒಣಗಿವೆ. ಜನರೊಂದಿಗೆ ಜಾನುವಾರು ಕೂಡ ನೀರಿನ ಸಮಸ್ಯೆ ಎದುರಿಸುತ್ತಿವೆ.

‘ಗ್ರಾಮದ ಜನರಿಗೆ ಸಮರ್ಪಕ ಕುಡಿಯುವ ನೀರು ಕೊಡಲು ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ. ತಾಂತ್ರಿಕ ತೊಂದರೆ ಸೇರಿದಂತೆ ಏನೇ ಸಮಸ್ಯೆ ಉದ್ಭವಿಸಿದರೂ ಜರೂರಾಗಿ ಬಗೆಹರಿಸಿ ಜನರಿಗೆ ನೀರು ಕೊಡಲು ಶ್ರಮಿಸುತ್ತಿದ್ದೇವೆ’ ಎಂದು ನೀರುಗಂಟಿ ಚಿಕ್ಕವೀರೇಗೌಡ ಹೇಳಿದರು.

ಕುಡಿಯುವ ನೀರಿನ ಯೋಜನೆ ನನೆಗುದಿಗೆ

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕೊಕ್ಕರೆ ಬೆಳ್ಳೂರು ಮತ್ತು 24 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತಾಂತ್ರಿಕ ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿದೆ. ಮದ್ದೂರು ಹೊಳೆಯಾಚಿನ ಹಲವು ಗ್ರಾಮಗಳ ಶಿಂಷಾ ನದಿ ನೀರಿನ ಕುಡಿಯುವ ನೀರಿನ ಕನಸು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರಾಸಕ್ತಿಯ ಫಲವಾಗಿ ನನಸಾಗದೇ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.