ADVERTISEMENT

ನಾಗಮಂಗಲ: ಶೀಲ ಶಂಕಿಸಿ ಪತ್ನಿಯನ್ನು ಕೊಂದ ಪತಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 14:38 IST
Last Updated 16 ಆಗಸ್ಟ್ 2023, 14:38 IST
ಕೊಲೆ ನಡೆದ ನಾಗಮಂಗಲ ಪಟ್ಟಣದ ಮುಳಕಟ್ಟೆ ರಸ್ತೆಯ ಮನೆಗೆ ಎಸ್ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಕೊಲೆ ನಡೆದ ನಾಗಮಂಗಲ ಪಟ್ಟಣದ ಮುಳಕಟ್ಟೆ ರಸ್ತೆಯ ಮನೆಗೆ ಎಸ್ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ನಾಗಮಂಗಲ: ಪಟ್ಟಣದ ಟಿ.ಬಿ.ಬಡಾವಣೆಯ ಮುಳಕಟ್ಟೆ ರಸ್ತೆ ನಿವಾಸಿ ಮಧುಶ್ರೀ (25) ಎಂಬುವರನ್ನು ಆಕೆಯ ಪತಿ ಮಂಜುನಾಥ್‌ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾನೆ. ಐದು ವರ್ಷದ ಮಗ ಮನ್ವಿತ್ ನನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.

ತಾಲ್ಲೂಕಿನ ಕರಡಹಳ್ಳಿ ಗ್ರಾಮದ ಮಂಜುನಾಥ್ ಐದು ವರ್ಷದ ಹಿಂದೆ ಮಧುಶ್ರೀ ಅವರನ್ನು ವಿವಾಹವಾಗಿದ್ದ. ಮಂಜುನಾಥ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದ. ಅಲ್ಲದೇ ಪತ್ನಿಯ ಶೀಲ ಶಂಕಿಸಿ ಹಲವು ಬಾರಿ ಜಗಳವಾಡಿದ್ದ. ಸಂಬಂಧಿಕರು ಬುದ್ಧಿವಾದ ಹೇಳಿ ಸರಿಪಡಿಸಿದ್ದರು. ಮಂಗಳವಾರ ಮಧ್ಯಾಹ್ನ ಬೆಂಗಳೂರಿನಿಂದ ಮನೆಗೆ ಬಂದಿದ್ದ ಮಂಜುನಾಥ್, ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ನಂತರ ಪತ್ನಿಯ ಹೊಟ್ಟೆಯ ಭಾಗಕ್ಕೆ ಆಯುಧದಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಬೆಳಿಗ್ಗೆ ಮಧು ಎಂಬ ವ್ಯಕ್ತಿ ಮನೆಗೆ ಹೋದಾಗ ಹತ್ಯೆ ನಡೆದಿರುವುದು ಗೊತ್ತಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಪಟ್ಟಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಗೆ ರವಾನಿಸಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಸಿಪಿಐ ನಿರಂಜನ್, ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.